ಬೆಂಗಳೂರು: ಹೈಡ್ರೊಪೊನಿಕ್ (ಮಣ್ಣು ರಹಿತ ಜಲಕೃಷಿ ಪದ್ಧತಿ) ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಫಾರ್ಮ್ಸ್–2015 ಮತ್ತು ಅಮೆರಿಕದ ಆ್ಯಮ್‌ಹೈಡ್ರೊ’ ಕಂಪನಿಗಳ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಸಮಾರಂಭದಲ್ಲಿ ಫಾರ್ಮ್ಸ್-2015 ಮತ್ತು ಆ್ಯಮ್ ಹೈಡ್ರೊ ಪ್ರತಿನಿಧಿಗಳು ಒಡಂಬಡಿಕೆಗೆ ಸಹಿ ಹಾಕಿದರು. ಈ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಕೃಷಿ ಸಚಿವ ಶಿವಶಂಕರರೆಡ್ಡಿ, ಕಡಿಮೆ ಸಂಪನ್ಮೂಲದ ಸೂಕ್ಷ್ಮ ಕೃಷಿ ಪದ್ಧತಿ ವೇಗವಾಗಿ ಬೆಳೆಯುತ್ತಿರುವ ಈ ಸಂದರ್ಭದಲ್ಲಿ ರಾಜ್ಯದಲ್ಲಿಯೂ ಹೈಡ್ರೊಪೊನಿಕ್ ಕೃಷಿಯನ್ನು ಉತ್ತೇಜಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಕಂದಾಯ ಸಚಿವ ಆರ್.ವಿ ದೇಶಪಾಂಡೆ ಮಾತನಾಡಿ, ನಗರೀಕರಣ ಹೆಚ್ಚಾಗುತ್ತಿರುವ ಈ ದಿನಗಳಲ್ಲಿ ಹೈಡ್ರೊಪೊನಿಕ್ ಕೃಷಿ ತಂತ್ರಜ್ಞಾನ ರೈತರ ಪಾಲಿನ ಆಶಾಕಿರಣವಾಗಿದೆ. ದಿನೇ ದಿನೇ ಕೃಷಿಭೂಮಿ ಸಂಕುಚಿತವಾಗುತ್ತಿದ್ದು, ಭವಿಷ್ಯದಲ್ಲಿ ಊರ್ಧ್ವಮುಖಿ ಕೃಷಿಯತ್ತ ಗಮನ ಹರಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.