ಬೆಂಗಳೂರು: ಕೇಂದ್ರ ಸರ್ಕಾರದ ಮೂರು ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದಲ್ಲಿ ರೈತರ ಪ್ರತಿಭಟನೆ ಇಂದೂ ಕೂಡಾ ಮುಂದುವರಿದಿದೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ರೈತರು ಜಮಾವಣೆಗೊಳ್ಳುತ್ತಿದ್ದು, ಬಾರುಕೋಲು ಬೀಸುತ್ತಾ ಸರ್ಕಾರವನ್ನು ಎಚ್ಚರಿಸುವ ರೀತಿ ಪ್ರತಿಭಟನೆ ನಡೆಸುತ್ತಿದ್ದಾರೆ.
ರೈಲು ನಿಲ್ದಾಣದಿಂದ ಸಾಗಿದ ಪ್ರತಿಭಟನಾ ಱಲಿ ವಿಧಾನಸೌಧಕ್ಕೆ ತೆರಳಿ ಮುತ್ತಿಗೆ ಹಾಕಲಿದೆ. ಆದ್ರೆ ಈಗಾಗಲೇ ರೈಲು ನಿಲ್ದಾಣಕ್ಕೆ ಬಿಗಿ ಪೊಲೀಸ್ ಭದ್ರತೆ ನೀಡಲಾಗಿದ್ದು, ಪೊಲೀಸ್ ಸರ್ಪಗಾವಲಿನ ಮಧ್ಯೆ ಪ್ರತಿಭಟನೆ ನಡೆಯಲಿದೆ. ವಿಧಾನಸೌಧ ಮುತ್ತಿಗೆಗೆ ಅವಕಾಶ ನೀಡದೆ ಪೊಲೀಸರು ಪ್ರತಿಭಟನಾನಿರತರನ್ನು ಫ್ರೀಡಂ ಪಾರ್ಕ್ ಬಳಿಯೇ ತಡೆದಿದ್ದಾರೆ.
ಪ್ರತಿಭಟನೆಗೆ ಅಡ್ಡಿ ಉಂಟುಮಾಡುತ್ತಿರುವ ಸರ್ಕಾರ ಹಾಗೂ ಪೊಲೀಸರ ವಿರುದ್ಧ ರೈತರು ಆಕ್ರೋಶಗೊಂಡಿದ್ದಾರೆ. ಇದು ಪ್ರಜಾಪ್ರಭುತ್ವ ಸರ್ಕಾರವೋ ಅಥವಾ ಸರ್ವಾಧಿಕಾರಿ ಸರ್ಕಾರವೋ?. ಸರ್ಕಾರ ರೈತರ ಪ್ರತಿಭಟನೆಯನ್ನು ಹತ್ತಿಕ್ಕುವ ಮೂಲಕ ಸಾಮಾನ್ಯರ ಹಕ್ಕು ಕಸಿದುಕೊಳ್ಳುವ ಪ್ರಯತ್ನ ಮಾಡುತ್ತಿದೆ. ಪೊಲೀಸರ ಮುಖಾಂತರ ರೈತರ ಮೇಲೆ ಗೂಂಡಾಗಿರಿ ನಡೆಸಲಾಗುತ್ತಿದೆ ಎಂದು ಆರೋಪಿಸಿದರು. 10 ಸಾವಿರಕ್ಕೂ ಹೆಚ್ಚು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿತ್ತು. ಆದರೆ ಎಲ್ಲಾ ಟೋಲ್ ಗಳಲ್ಲಿ ರೈತರನ್ನು ತಡೆಯಲಾಗುತ್ತಿದ್ದು, ಕೇವಲ 100 ರಷ್ಟು ರೈತರು ಮಾತ್ರ ಸಂಗೊಳ್ಳಿ ರೈಲು ನಿಲ್ದಾಣದಲ್ಲಿ ಜಮಾವಣೆಗೊಂಡಿದ್ದಾರೆ. ರೈತ ಮುಖಂಡರ ಮನೆಗೆ ಹೋಗಿ ಕುಟುಂಬಸ್ಥರಿಗೆ ಬೆದರಿಕೆ ಹಾಕಲಾಗಿದೆ. ಅದರೂ ನಾವು ಜಗ್ಗಲ್ಲಾ ಬಗ್ಗಲ್ಲಾ. ಯಾವ ಲಾಠಿಗೂ ಹೆದರಲ್ಲಾ ಎಂದು ಪ್ರತಿಭಟನಾಕಾರರು ಗುಡುಗಿದರು.