ಬೆಂಗಳೂರು: ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅಂತಿಮ ದರ್ಶನಕ್ಕೆ ನಗರದ ಕೆಪಿಸಿಸಿ ಮುಖ್ಯ ಕಚೇರಿಯಲ್ಲಿ ಆಯೋಜನೆ ಮಾಡಿದ್ದು, ರಾಜ್ಯ ಕಾಂಗ್ರೆಸ್ ನಾಯಕರು ಅಂತಿಮ ನಮನ ಸಲ್ಲಿಸಿದರು.
ಆಸ್ಕರ್ ಫರ್ನಾಂಡಿಸ್ ಗೆ ಕೆಪಿಸಿಸಿ ನಾಯಕರಿಂದ ಅಂತಿಮ ನಮನ ಇಂದು ಕ್ರೈಸ್ತ ಧರ್ಮದ ಪ್ರಕಾರ ಸಂತ ಪ್ಯಾಟ್ರಿಕ್ ರುದ್ರಭೂಮಿಯಲ್ಲಿ ಆಸ್ಕರ್ ಫರ್ನಾಂಡಿಸ್ ಅಂತಿಮ ಕ್ರಿಯೆ ನಡೆಸಲು ಕುಟುಂಬಸ್ಥರು ತೀರ್ಮಾನಿಸಿದ್ದು, ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನ ಪರಿಷತ್ ವಿರೋಧ ಪ್ರತಿಪಕ್ಷ ನಾಯಕ ಎಸ್.ಆರ್ ಪಾಟೀಲ್ ಸೇರಿದಂತೆ ಮಲ್ಲಿಕಾರ್ಜುನ ಖರ್ಗೆ ಅಂತಿಮ ನಮನ ಸಲ್ಲಿಸಿದರು.
ಅಂತಿಮ ಯಾತ್ರೆಯಲ್ಲಿ ವೇಣುಗೋಪಾಲ್ ಭಾಗಿ
ಕೆಪಿಸಿಸಿ ಕಚೇರಿಯಲ್ಲಿ ಪಾರ್ಥಿವ ಶರೀರದ ದರ್ಶನದ ನಂತರ, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಫರ್ನಾಂಡಿಸ್ಗೆ ನಮನ ಸಲ್ಲಿಸಲು ಇಂದು ಮಧ್ಯಾಹ್ನ ಸಂತ ಪ್ಯಾಟ್ರಿಕ್ ರುದ್ರಭೂಮಿಗೆ ಆಗಮಿಸಿ, ಅಂತಿಮ ವಿಧಿ ವಿಧಾನದಲ್ಲಿ ಉಪಸ್ಥಿತರಿರಲಿದ್ದಾರೆ ಎಂದು ಕೆಪಿಸಿಸಿ ಹೇಳಿದೆ. ಕೆಪಿಸಿಸಿ ಕಚೇರಿಯಿಂದ ರುದ್ರಭೂಮಿಗೆ ಅಂತಿಮ ಯಾತ್ರೆಗೆ ವಾಹನ ಸಿದ್ಧವಾಗಿದ್ದು, ಕ್ವೀನ್ಸ್ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ.
ಬಡವರ ದನಿಯಾಗಿದ್ದ ಆಸ್ಕರ್: ಲಕ್ಷ್ಮಿ ಹೆಬ್ಬಾಳ್ಕರ್
ಫರ್ನಾಂಡಿಸ್ ಪಾರ್ಥಿವ ಶರೀರದ ಅಂತಿಮ ದರ್ಶನ ಬಳಿಕ ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, 20 ವರ್ಷದಿಂದ ಆಸ್ಕರ್ ಫರ್ನಾಂಡಿಸ್ ಅವರನ್ನು ಹತ್ತಿರದಿಂದ ನೋಡಿದ್ದೇನೆ. ಅವರು ಬಹಳಷ್ಟು ಬಡವರ ಪರ ಧ್ವನಿ ಎತ್ತುತ್ತಿದ್ದರು. ಕಾಂಗ್ರೆಸ್ ಪಕ್ಷದವರಿಗೆ, ಕುಟುಂಬದವರಿಗೆ ಈ ದುಃಖ ಬರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೋಯ್ಲಿ ಮಾತನಾಡಿ, ಆಸ್ಕರ್ ಫರ್ನಾಂಡಿಸ್ ಅವರು ಮಿತ್ರರಾಗಿದ್ದರು. ಜಿಲ್ಲಾ ಮಟ್ಟದಲ್ಲಿ, ರಾಜ್ಯ, ರಾಷ್ಟ್ರದ ಮಟ್ಟದಲ್ಲಿ ಕೆಲಸ ಮಾಡಿದ್ದೇವೆ. ಅತ್ಯಂತ ಸರಳ, ಸಜ್ಜನಿಕೆಯ ನಾಯಕ. ಅವರ ಜೊತೆ ಕೆಲಸ ಮಾಡಿದ್ದು ನನ್ನ ಸೌಭಾಗ್ಯ ಎಂದರು.
ರಾಷ್ಟ್ರೀಯ ನಾಯಕನನ್ನು ಕಳೆದುಕೊಂಡಿದ್ದೇವೆ: ವೇಣುಗೋಪಾಲ್
ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್ ಮಾತನಾಡಿ, ಕಾಂಗ್ರೆಸ್ ಪಕ್ಷ ಉತ್ತಮ ರಾಷ್ಟ್ರೀಯ ನಾಯಕನನ್ನ ಕಳೆದುಕೊಂಡಿದೆ. ಫರ್ನಾಂಡಿಸ್ ಇಡೀ ಜೀವನವನ್ನ ಪಕ್ಷಕ್ಕೆ ಮುಡುಪಾಗಿಟ್ಟಿದ್ದರು. ಕಳೆದ ಬಾರಿ ದೆಹಲಿಗೆ ಹೋದಾಗ ನಾವು ಭೇಟಿಯಾಗಿದ್ದೇವು. ಅನೇಕ ಖಾತೆಗಳ ಸಚಿವರಾಗಿ ಕೆಲಸ ಮಾಡಿದ್ದಾರೆ. ಅವರ ಅಗಲಿಕೆ ನಮ್ಮನ್ನ ಕಾಡುತ್ತಿದೆ. ಕಾಂಗ್ರೆಸ್ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.