ಬೆಂಗಳೂರು:ಸಾರ್ವಜನಿಕ ಜೀವನದಲ್ಲಿ ಅಪಾರ ಸೇವೆ ಸಲ್ಲಿಸಿರುವ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಭಾರತ ರತ್ನಕ್ಕೆ ಅರ್ಹರಾಗಿದ್ದು, ಭಾರತ ರತ್ನ ಪ್ರಶಸ್ತಿಗೆ ಅವರ ಹೆಸರನ್ನು ಪರಿಗಣಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ಭಾರತ ರತ್ನ ಪ್ರಶಸ್ತಿಗೆ ಅಡ್ವಾಣಿ ಹೆಸರು ಪರಿಗಣಿಸಿ: ಮೋದಿಗೆ ಪತ್ರ ಬರೆದ ಶಂಕರಮೂರ್ತಿ - Banglore
ಭಾರತ ರತ್ನ ಪ್ರಶಸ್ತಿಗೆ ಬಿಜೆಪಿ ಹಿರಿಯ ನಾಯಕ ಅಡ್ವಾಣಿ ಅವರ ಹೆಸರನ್ನು ಪರಿಗಣಿಸಬೇಕು ಎಂದು ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಕರ್ನಾಟಕದ ಸಾವಿರಾರು ಕಾರ್ಯಕರ್ತರ ಪರವಾಗಿ ಅಡ್ವಾಣಿಗೆ ಭಾರತ ರತ್ನವನ್ನು ನೀಡುವಂತೆ ವಿನಂತಿಸುವುದಾಗಿ ಡಿ.ಹೆಚ್. ಶಂಕರಮೂರ್ತಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಲಾಲ್ ಕೃಷ್ಣ ಅಡ್ವಾಣಿ ಏಳೂವರೆ ದಶಕಗಳಿಂದ ಸಾರ್ವಜನಿಕ ಜೀವನದಲ್ಲಿದ್ದಾರೆ. ಆರ್‌ಎಸ್‌ಎಸ್, ಭಾರತೀಯ ಜನ ಸಂಘ ಮತ್ತು ಬಿಜೆಪಿ ಮೂಲಕ ಮಾತೃಭೂಮಿಗೆ ಅವರು ಸಲ್ಲಿಸಿರುವ ಸೇವೆ, ತ್ಯಾಗ ಮತ್ತು ನೀಡಿದ ಕೊಡುಗೆ ಅದ್ಭುತವಾಗಿದೆ. ಅವರ ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದಲ್ಲಿ ಸ್ವಚ್ಛ, ಪ್ರಾಮಾಣಿಕ ಹಾಗೂ ಅತ್ಯಂತ ವಿಶ್ವಾಸಾರ್ಹತೆ ಹೊಂದಿರುವ ನಾಯಕರಾಗಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರಗಳ ಎಲ್ಲಾ ಅಂಶಗಳ ಬಗ್ಗೆ ಹೇರಳವಾದ ಜ್ಞಾನ ಮತ್ತು ಅನುಭವ ಹೊಂದಿರುವ ವ್ಯಕ್ತಿಯಾಗಿರುವ ಅಡ್ವಾಣಿ ಬಗ್ಗೆ ಪ್ರತಿಯೊಬ್ಬರೂ ಹೆಮ್ಮೆ ಪಡುತ್ತಾರೆ ಎಂದು ವಿವರವಾಗಿ ಪತ್ರದಲ್ಲಿ ಅಡ್ವಾಣಿ ಸಾಧನೆಯನ್ನು ಶಂಕರಮೂರ್ತಿ ಉಲ್ಲೇಖಿಸಿದ್ದಾರೆ.
ವಾಸ್ತವವಾಗಿ ಲಕ್ಷಾಂತರ ಜನರಂತೆ ನಾನು ಕೂಡ ಅಡ್ವಾಣಿಯವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದೇನೆ. ಅವರೊಂದಿಗೆ ಪ್ರವಾಸ ಮಾಡಿದ್ದೇನೆ. ಐದು ದಶಕದಿಂದ ಅವರನ್ನು ಹತ್ತಿರದಿಂದ ತಿಳಿದುಕೊಂಡಿದ್ದೇನೆ. ಅವರ ಸಾರ್ವಜನಿಕ ಭಾಷಣವನ್ನು ಅನುವಾದಿಸಿದ್ದೇನೆ. ಭಾರತ ರತ್ನ ಪ್ರಶಸ್ತಿಗೆ ಅಡ್ವಾಣಿ ಶ್ರೇಷ್ಠತೆ ಸೇರಿದಂತೆ ಎಲ್ಲ ರೀತಿಯಲ್ಲೂ ಅರ್ಹರಿದ್ದಾರೆ. ರಾಜ್ಯದ ಸಾವಿರಾರು ಕಾರ್ಯಕರ್ತರ ಬಯಕೆಯೂ ಅದೇ ಆಗಿದೆ. ಆದ್ದರಿಂದ ಕರ್ನಾಟಕದ ಸಾವಿರಾರು ಕಾರ್ಯಕರ್ತರ ಪರವಾಗಿ ಅಡ್ವಾಣಿಗೆ ಭಾರತ ರತ್ನವನ್ನು ನೀಡುವಂತೆ ವಿನಂತಿಸುವುದಾಗಿ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಮನವಿ ಮಾಡಿದ್ದಾರೆ.