ಬೆಂಗಳೂರು : 'ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪ್ರತಿಪಕ್ಷಗಳ ಸಭೆಗೆ (ಮಹಾಘಟಬಂಧನ್ ) ದೇವೇಗೌಡರು ಬಂದರೆ ನಾವು ಬರುವುದಿಲ್ಲ ಎಂದು ಸ್ಥಳೀಯ ಕಾಂಗ್ರೆಸ್ನ ಕೆಲ ನಾಯಕರು ಧಮಕಿ ಹಾಕಿದ್ದರಿಂದ ತಮಗೆ ಆಹ್ವಾನ ನೀಡಲಿಲ್ಲ ಎಂದು' ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ಗಂಭೀರ ಆರೋಪ ಮಾಡಿದ್ದಾರೆ.
ಪಕ್ಷದ ಕಚೇರಿ ಜೆಪಿ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಲವು ಕಾಂಗ್ರೆಸ್ ನಾಯಕರೇ ನಾನು ಬರುವುದಕ್ಕೆ ಇಷ್ಟ ಪಡಲಿಲ್ಲ. ನಾನು ಬಂದರೆ ನಾವು ಬರಲ್ಲ ಅಂತ ಕಾಂಗ್ರೆಸ್ನ ಕೆಲವರು ಹೇಳಿದ್ರು. ಹಾಗಾಗಿ ನಾನು ಹೋಗಲಿಲ್ಲ. ನಿತೀಶ್ ಕುಮಾರ್, ಶರದ್ ಪವಾರ್ ಎಲ್ಲರೂ ನನ್ನ ಸ್ನೇಹಿತರೇ. ಅವರು ನನ್ನನ್ನು ಕರೆದಾಗ ಬರುವುದಿಲ್ಲ ಎಂದು ಹೇಳಿದೆ. ಶರತ್ ಪವಾರ್ ಇಲ್ಲಿಗೆ ಬಂದು ಹೋದ್ರು, ಈಗ ಏನಾಗಿದೆ. ಇಲ್ಲಿಗೆ ಬಂದು ಹೋದ ಮೇಲೂ ಅವರು ಎನ್ಡಿಎಗೆ ಬೆಂಬಲ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜಕೀಯ ಪರಿಸ್ಥಿತಿ ಏನಾಗುತ್ತದೆ ಕಾದು ನೋಡಬೇಕು ಎಂದು ಮಾರ್ಮಿಕವಾಗಿ ನುಡಿದರು.
ಕಾಂಗ್ರೆಸ್ ವಿರುದ್ಧ ಕಿಡಿ : ಸಮಯ ಬಂದಾಗ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಸೆಕ್ಯುಲರ್ ಅಂತೆ ಕಾಣುತ್ತದೆ. ಆ ಪಕ್ಷಕ್ಕೆ ಅವಶ್ಯಕತೆ ಬಂದಾಗ ಜೆಡಿಎಸ್ ನಾನ್ ಸೆಕ್ಯುಲರ್ ಆಗಿ ಕಾಣುತ್ತದೆ. ಮಂಡ್ಯದಲ್ಲಿ ಕಾಂಗ್ರೆಸ್-ಬಿಜೆಪಿ ಸಹಕಾರ, ಜೆಡಿಎಸ್‌ಗೆ ಕೊಕ್. ಯಾವುದೋ ಬೇಜವಾಬ್ದಾರಿ ಪತ್ರಿಕೆ. ನಿಮಗೆ ಬೇಕು ಅಂದಾಗ ಬೇಕಾದಂತೆ ಬರೀತೀರಾ ಎಂದು ಕಿಡಿಕಾರಿದರು. ಕಾಂಗ್ರೆಸ್ನವರು ಸತ್ಯವಂತರು, ನೀತಿವಂತರು, ಅವರಿಗೆ ಬೇಕಾದಾಗ ಯಾರ ಜೊತೆ ಬೇಕಾದರೂ ಹೊಂದಾಣಿಕೆ ಮಾಡಿಕೊಳ್ಳಬಹುದು ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸೇತರ ಸರ್ಕಾರ ಬಂದಿದ್ದು 1983 ರಲ್ಲಿ. 18 ಬಿಜೆಪಿ, 8 ಕಮ್ಯುನಿಸ್ಟ್, 5 ಪಕ್ಷೇತರರು. ಮೊದಲ ಬಾರಿಗೆ 1983ರಲ್ಲಿ ಕಾಂಗ್ರೆಸೇತರ ಸರ್ಕಾರ ರಚನೆ ಮಾಡಲಾಯ್ತು. ಆಗ ಬಿಜೆಪಿ ಬೆಂಬಲ ಪಡೆದು ಸರ್ಕಾರ ಮಾಡಿದ್ದೆವು. ಅಂದು ರಾಮಕೃಷ್ಣಹೆಗಡೆ ಅವರು ಬಿಜೆಪಿ ಜೊತೆ ಸಂಬಂಧ ಮಾಡಿರಲಿಲ್ಲವೇ?. ಆಗ ಸಿದ್ದರಾಮಯ್ಯ ಕಾವಲು ಸಮಿತಿ ಅಧ್ಯಕ್ಷ ಆಗಿದ್ರು. ನಾನು ಬಿಜೆಪಿ ಬೆಂಬಲಿತ ಸರ್ಕಾರದಲ್ಲಿ ಲೋಕೋಪಯೋಗಿ ಸಚಿವನಾಗಿದ್ದೆ. ಯಾವ ಯಾವ ಸಂದರ್ಭದಲ್ಲಿ ಏನಾಗಿದೆ ಎಂಬುದು ನನಗೆ ಗೊತ್ತಿದೆ. ಹೇಳಿ ಇಬ್ರಾಹಿಂ ಅವರೇ ಹೇಳೋಕೆ ಕಷ್ಟಾನಾ, ಅಂತ ಪಕ್ಕದಲ್ಲೇ ಇದ್ದ ಇಬ್ರಾಹಿಂ ಪ್ರಶ್ನೆ ಮಾಡಿದರು. ರಾಮಕೃಷ್ಣ ಹೆಗಡೆ ಅವರು ಬಿಜೆಪಿ ಜೊತೆ ಹೋಗಿ ಮುಖ್ಯಮಂತ್ರಿ ಆಗಲಿಲ್ಲವೇ?, ಕುಮಾರಸ್ವಾಮಿ ಮಾತ್ರನಾ ಅವರ ಜೊತೆ ಹೋಗಿದ್ದು ಎಂದು ತಿರುಗೇಟು ನೀಡಿದರು.
ಜೆಡಿಎಸ್ ಅನ್ನು ಮುಗಿಸಲು ಸಾಧ್ಯವಿಲ್ಲ : ಜೆಡಿಎಸ್ ಪಕ್ಷವನ್ನು ಯಾರಿಂದಲೂ ಮುಗಿಸಲು ಸಾಧ್ಯವಿಲ್ಲ. ಜೆಡಿಎಸ್ ಪಕ್ಷವನ್ನು ಅಳಿಸಬಹುದು ಅಂತ ಅಂದುಕೊಂಡಿದ್ದರೆ ಅದು ಭ್ರಮೆ. ಅದು ಸಾಧ್ಯವಿಲ್ಲ. ರಾಜಕೀಯದಲ್ಲಿ ಯಾವ ಸಂದರ್ಭದಲ್ಲಿ ಏನೇನಾಗಿದೆ ಅಂತ ಜಿ ಟಿ ದೇವೇಗೌಡರು ವಿವರವಾಗಿ ಹೇಳಿದ್ದಾರೆ. ಕಾಂಗ್ರೆಸ್ ನವರ ಅಧಿಕಾರಕ್ಕೆ ಏನೆಲ್ಲಾ ಮಾಡಿದರು ಅಂತ ಹೇಳಿದ್ದಾರೆ. ಅಂದಿನಿಂದ 1983 ರಿಂದ ಇಲ್ಲಿಯವರೆಗೂ ಜೆಡಿಎಸ್ ಇದೆ. ನಾನು ಸಿಎಂ, ಪ್ರಧಾನಿ ಆದೆ. ಕುಮಾರಸ್ವಾಮಿ ಸೇರಿದಂತೆ ಅನೇಕರು ಸಿಎಂ ಆಗಿದ್ದಾರೆ. ಕೆಲವರು ಮಂತ್ರಿಗಳಾಗಿದ್ದಾರೆ.
ನಮ್ಮ 19 ಶಾಸಕರು, 7 ವಿಧಾನಪರಿಷತ್ ಸದಸ್ಯರ ಜೊತೆ ಕುಳಿತು ಕುಮಾರಸ್ವಾಮಿ ಚರ್ಚೆ ಮಾಡಿದ್ದಾರೆ. ಪಕ್ಷ ಸಂಘಟನೆ ಮಾಡಲು ಜಿ ಟಿ ದೇವೇಗೌಡರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿ, ರಾಜ್ಯಾದ್ಯಂತ ಕಾರ್ಯಕ್ರಮ ರೂಪಿಸಲು ಸಲಹೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡುವುದರ ಬಗ್ಗೆಯೂ ಚರ್ಚಿಸಲಾಗುತ್ತಿದೆ. ಲಕ್ಷಾಂತರ ಕಾರ್ಯಕರ್ತರ ಅಭಿಪ್ರಾಯ ಪಡೆದು ಒಂದುಗೂಡಿಸೋ ಕೆಲಸ ಮಾಡಲಿದೆ ಎಂದು ಹೇಳಿದರು.