ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ ಬೆಂಗಳೂರು :ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು, "ನಾನು ಮನೆಯಲ್ಲಿ ಕುಳಿತು ಎಲ್ಲವನ್ನೂ ನೋಡುತ್ತಿದ್ದೇನೆ. ಹೆಚ್.ಡಿ.ಕುಮಾರಸ್ವಾಮಿ ಅವರ ಪೆನ್ ಡ್ರೈವ್ ವಾದ, ವಿವಾದ ನೋಡಿದ್ದೇನೆ. ಅವರು ಅಷ್ಟು ಸುಲಭವಾಗಿ ಮಾತನಾಡುವುದಿಲ್ಲ" ಎಂದು ಹೇಳಿದರು.
ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕುಮಾರಸ್ವಾಮಿ ಅವರನ್ನು ಅಷ್ಟು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ. ತುಂಬಾ ವಿಷಯಗಳಿವೆ. ನನಗೆ ಎಲ್ಲವೂ ಗೊತ್ತಿದೆ. ಪೆನ್ ಡ್ರೈವ್ ಬಗ್ಗೆ ಲಘುವಾಗಿ ಮಾತನಾಡುವುದು ಬೇಡ. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತನಾಡುತ್ತೇನೆ" ಎಂದು ಮಾರ್ಮಿಕವಾಗಿ ನುಡಿದರು.
ರಾಮನಗರದಿಂದ ಕನಕಪುರಕ್ಕೆ ಮೆಡಿಕಲ್ ಕಾಲೇಜು ಶಿಫ್ಟ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ, "ಕುಮಾರಸ್ವಾಮಿ ದೇವೇಗೌಡರ ಮಗ ಎಂದು ಮಾತನಾಡುವುದಿಲ್ಲ. ನನಗೆ ಚನ್ನಪಟ್ಟಣ, ರಾಮನಗರ, ಕನಕಪುರ, ಮಾಗಡಿ ಎಲ್ಲವೂ ಒಂದೇ. ರಾಮನಗರ ಜಿಲ್ಲೆ ಮಾಡಿದ್ದು ಯಾರು?. ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನನ್ನನ್ನು ಸೋಲಿಸಬೇಕೆಂದು ತೀರ್ಮಾನ ಮಾಡಿದ್ರು. ಆದರೆ, ರಾಮನಗರ ಜಿಲ್ಲೆ ಮಾಡಲು ಆಗ್ತಿರಲಿಲ್ವಾ?. ಕುಮಾರಸ್ವಾಮಿಯವರೇ ಬಂದು ಮಾಡಬೇಕಿತ್ತಾ?. ಅಂದು ಮೆಡಿಕಲ್ ಕಾಲೇಜು ಮಂಜೂರಾಗಿದ್ದು ಎಲ್ಲಿ, ಜಾಗ ಮಂಜೂರು ಆಗಿದ್ದೆಲ್ಲಿ?. ಮಾಯಗೊಂಡನಹಳ್ಳಿ 9 ಎಕರೆ ತಕರಾರು ತೆಗೆದರು. ಅದನ್ನು ಬಿಟ್ಟು ಕೆಲಸ ಶುರು ಮಾಡಿ" ಎಂದರು.
"ಕನಕಪುರ ನನಗೆ ಮನೆ ಇದ್ದ ಹಾಗೆ. ಆದರೆ, ರಾಮನಗರ ಕೇಂದ್ರ ಸ್ಥಾನ. ಮೆಡಿಕಲ್ ಕಾಲೇಜ್ ವಿಚಾರದಲ್ಲೂ ರಾಜಕೀಯ ಮಾಡಬಾರದು. ಅವರದ್ಧೇ ಸರ್ಕಾರವಿದೆ. ಕನಕಪುರಕ್ಕೆ ಇನ್ನೊಂದು ಕಾಲೇಜ್ ಮಾಡಲಿ. ನನ್ನದೇನೂ ತಕರಾರಿಲ್ಲ. ಆದರೆ, ರಾಮನಗರ ಮೆಡಿಕಲ್ ಕಾಲೇಜ್ಗೆ ತೊಂದರೆ ಮಾಡಬೇಡಿ ಎಂದು ನ್ಯಾಯಯುತವಾಗಿ ಕೇಳುತ್ತಿದ್ದಾರೆ. ಕುಮಾರಸ್ವಾಮಿ ಅವರ ಮೇಲೆ ಆರೋಪ ಮಾಡಬೇಡಿ. ಕುಮಾರಸ್ವಾಮಿ ಅವರು ಯಾವುದೇ ದ್ವೇಷದ ರಾಜಕಾರಣ ಮಾಡುತ್ತಿಲ್ಲ" ಎಂದರು.
"ಡಿಸಿಎಂ ಡಿ.ಕೆ.ಶಿವಕುಮಾರ್ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳುವುದಕ್ಕೆ ಹೋಗುವುದಿಲ್ಲ. ಅವರ ಕ್ಷೇತ್ರದ ಬಗ್ಗೆ ಅವರು ಮಾತನಾಡಿದರೆ, ನಾನೇಕೆ ಆ ರೀತಿ ಮಾತನಾಡಲಿ. ಈ ವಿಷಯ ಹೇಳಿದ್ರೆ, ವ್ಯಕ್ತಿ ದ್ವೇಷನಾ? ಇಂಥದು ಬಹಳ ಇದೆ. ಹೋರಾಟ ನಡೆದಿದ್ದು ಸತ್ಯ. ಇದು ಇಲ್ಲಿಗೆ ನಿಲ್ಲುವುದಿಲ್ಲ" ಎಂದು ಹೇಳಿದರು.
"ಯಾವ ಶಾಸಕರೂ ಪಕ್ಷ ಬಿಡಲ್ಲ": "ಲೋಕಸಭಾ ಕ್ಷೇತ್ರದ ಪುನರ್ ವಿಂಗಡಣೆ ಬಗ್ಗೆ ಚರ್ಚೆ ಆಗುತ್ತಿದೆ. ಜಿ.ಟಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಯ ಬಗ್ಗೆ ತಯಾರಿ ಮಾಡ್ತಿದಾರೆ. ಬಿಬಿಎಂಪಿ ಚುನಾವಣೆಯ ಬಗ್ಗೆಯೂ ತಯಾರಿ ಮಾಡ್ತಿದಾರೆ. ಇನ್ನು ನಮ್ಮ ಯಾವ ಶಾಸಕರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಇದೆಲ್ಲಾ ಬರೀ ಊಹಾಪೋಹ ಅಷ್ಟೇ. ಯಾರು ಹೋಗ್ತಾರೆ. ಇಂಥವರು ಹೋಗ್ತಾರೆ ಎಂದು ಹೇಳಿದರೆ ನಾವು ಸರಿ ಮಾಡಿಕೊಳ್ಳುತ್ತೇವೆ. ಈ ರೀತಿಯ ಊಹಾಪೋಹದ ಸುದ್ದಿ ಮಾಡಬೇಡಿ. ಈ ಪ್ರಾದೇಶಿಕ ಪಕ್ಷ ಉಳಿಯಲು ಬಿಡಿ" ಎಂದರು.
ಸೆ.10ರಂದು ಸಮಾವೇಶ: "ಸೆಪ್ಟೆಂಬರ್ 10ರಂದು ನಗರದ ಅರಮನೆ ಮೈದಾನದಲ್ಲಿ ಕಾರ್ಯಕರ್ತರ ಸಮಾವೇಶ ಏರ್ಪಡಿಸಲಾಗಿದೆ. ಸುಮಾರು 20 ಸಾವಿರ ಕಾರ್ಯಕರ್ತರು ಆಗಮಿಸುವ ನಿರೀಕ್ಷೆ ಇದೆ. ಅದಕ್ಕಾಗಿ ಎಲ್ಲಾ ಜಿಲ್ಲೆಗಳಿಂದ ಕಾರ್ಯಕರ್ತರು ಬರಬೇಕೆಂದು ಮನವಿ ಮಾಡಿದ ಗೌಡರು, ಈ 91 ರ ವಯಸ್ಸಿನಲ್ಲೂ ಕೆಲಸ ಮಾಡುತ್ತಿದ್ದೇನೆ. ಯಾರೂ ನನ್ನನ್ನು ಕೈಬಿಡಬೇಡಿ" ಎಂದು ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದರು.
"ಮಂಡ್ಯ ಜಿಲ್ಲೆಯ ರಾಜಕಾರಣವನ್ನು ಬಹಳ ಚರ್ಚೆ ಮಾಡಿದ್ದೇನೆ. ಪ್ರತಿಯೊಂದೂ ವಿಚಾರ ತಿಳಿದಿದ್ದೇನೆ. ಒಬ್ಬನೇ ಒಬ್ಬ ಶಾಸಕ ಹೋಗ್ತಾರೆ ಎಂದರೆ ತಿಳಿಸಿ. ಸೆ.10ರಂದು 20 ಸಾವಿರ ಜನ ಸೇರಿಸಿ ಕಾರ್ಯಕ್ರಮ ಮಾಡುತ್ತೇವೆ. ನಾವು ದುಡ್ಡು ಕೊಟ್ಟು ಜನ ಕರೆಸಲ್ಲ. ದೇವೇಗೌಡರ ಪಕ್ಷವನ್ನು ಅವರ ಕೊನೆ ಗಳಿಗೆಯಲ್ಲಿ ಉಳಿಸಲೇಬೇಕೆಂದು ಜನ ಬರುತ್ತಾರೆ. ಹಿಂದೆ ಏನೇ ಸಮಸ್ಯೆ ಆಗಿದ್ರೂ ನಾನು ಕ್ಷಮೆ ಕೇಳ್ತೀನಿ" ಎಂದರು.
"ಪಕ್ಷದ ಸಂಘಟನೆ ದೃಷ್ಟಿಯಿಂದ ಹಲವು ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ನಾನು ಮನೆಯಲ್ಲಿ ಕೂರುವುದಿಲ್ಲ. ಪಕ್ಷ ಸಂಘಟನೆಗೊಳಿಸಿ ಉಳಿಸಬೇಕೆಂದು ಕೆಲಸ ಮಾಡುತ್ತಿದ್ದೇವೆ. ಕಾಂಗ್ರೆಸ್ ಮತ್ತು ಬಿಜೆಪಿಯ ಈ ರಾಷ್ಟ್ರೀಯ ಪಕ್ಷಗಳ ಮಧ್ಯೆ ನಮ್ಮ ಪ್ರಾದೇಶಿಕ ಪಕ್ಷ ಉಳಿಸುವ ಸಂಕಲ್ಪ ಮಾಡಿದ್ದೇನೆ. ಈ ದೇಶದ ರಾಜಕಾರಣ ಹೇಗೆ ನಡೆಯುತ್ತಿದೆ ಎಂದು ನನಗೆ ಗೊತ್ತಿದೆ. ಮಾಜಿ ಸಚಿವ ಜಿ. ಟಿ ದೇವೇಗೌಡ ಅಧ್ಯಕ್ಷತೆಯಲ್ಲಿ ಕೋರ್ ಕಮಿಟಿ ಮಾಡಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳಲಿದ್ದಾರೆ" ಎಂದು ತಿಳಿಸಿದರು.
"ದೇಶದಲ್ಲಿ ಪ್ರಾದೇಶಿಕ ಪಕ್ಷವನ್ನು ತುಳಿಯುತ್ತಿದ್ದಾರೆ. ನಾನು ತುಂಬ ವಿಚಾರ ಮಾತನಾಡಬಲ್ಲೆ. ಆದರೆ ಇಂದು ಪಕ್ಷದ ಸಂಘಟನೆಯಷ್ಟೇ ಮಾತನಾಡುತ್ತೇನೆ. ಕುಮಾರ ಸ್ವಾಮಿಯವರು ಎಲ್ಲ ಕಡೆ ಓಡಾಡಬೇಕಾಗುತ್ತದೆ. ಅವರ ನಾಯಕತ್ವದಲ್ಲೇ ಪಕ್ಷ ಮುನ್ನಡೆಯಲಿದೆ. ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಕೋರ್ ಕಮಿಟಿ ಸದಸ್ಯರ ವಿಶ್ವಾಸಕ್ಕೆ ಪಡೆದು ಒಂದು ತೀರ್ಮಾನ ಮಾಡ್ತೀವಿ. ನಾಳೆ ಬೆಳಿಗ್ಗೆ ಚುನಾವಣೆ ಬರೊಲ್ಲ. ಯಾವುದೇ ತೀರ್ಮಾನ ಆಗಲಿ ಎಲ್ಲರೂ ಕೂತು ಚರ್ಚೆ ಮಾಡುತ್ತೇವೆ" ಎಂದರು.
ಭೂ ಮಾಫಿಯಾಗೆ ಸರ್ಕಾರಿ ಮಾಫಿ ವಿಚಾರಕ್ಕೆ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ ದೇವೇಗೌಡರು, "ಬೆಂಗಳೂರಿನಲ್ಲಿ ಸರ್ಕಾರಿ ಜಾಗ ಅತಿಕ್ರಮಣ ಸೇರಿದಂತೆ ನನ್ನ ಬಳಿ ತುಂಬಾ ವಿಷಯ ಇದೆ. ಇದು ಒಂದು ಘಟನೆ ಅಷ್ಟೇ. ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ. ಯಾರ್ಯಾರು ಅವರ ಮಾತಿನ ವೈಖರಿ, ಪ್ರತಿಯೊಂದನ್ನು ಗಮನಿಸುತ್ತೇನೆ" ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ಅವರಿಗೆ ಸಂದೇಶ ರವಾನಿಸಿದರು.
ಇಸ್ರೋ ಸಾಧನೆಗೆ ಪ್ರಶಂಸೆ: ಇದೇ ವೇಳೆ, ಚಂದ್ರಯಾನ-3ರ ಯಶಸ್ಸಿಗಾಗಿ ಇಸ್ರೋ ವಿಜ್ಞಾನಿಗಳ ಸಾಧನೆಗೆ ದೇವೇಗೌಡರು ಪ್ರಶಂಸೆ ವ್ಯಕ್ತಪಡಿಸಿದರು. "ವಿಜ್ಞಾನಿಗಳು ಚಂದ್ರಯಾನ ಯಶಸ್ವಿಗೊಳಿಸಿ ಇಡೀ ವಿಶ್ವವೇ ಭಾರತದ ಕಡೆ ನೋಡುವಂತೆ ಮಾಡಿದ್ದಾರೆ. ದೇಶದ ಘನತೆ ಮತ್ತು ಗೌರವ ಹೆಚ್ಚಿಸಿದ್ದಾರೆ. ವಿಜ್ಞಾನಿಗಳ ಸಾಧನೆಗೆ ಅಭಿನಂದನೆ ಸಲ್ಲಿಸುತ್ತೇನೆ" ಎಂದು ಹೇಳಿದರು.
ಇದನ್ನೂ ಓದಿ:ಡಿಸಿಎಂಗೆ ದೇವೇಗೌಡರ ಕುಟುಂಬವನ್ನು ಖರೀದಿಸುವ ಶಕ್ತಿ ಇಲ್ಲ : ಹೆಚ್ ಡಿ ಕುಮಾರಸ್ವಾಮಿ