ಬೆಂಗಳೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಮರು ಆಯ್ಕೆಯಾಗಿದ್ದು, ಇಂದು ಅಧಿಕೃತ ಘೋಷಣೆಯಾಗಲಿದೆ ಎಂದು ತಿಳಿದುಬಂದಿದೆ.
ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಇಂದು ರಾತ್ರಿ ನಡೆದ ಜಾತ್ಯತೀತ ಜನತಾದಳದ ರಾಷ್ಟ್ರೀಯ ಕಾರ್ಯಕಾರಿಣಿ ಮತ್ತು ರಾಷ್ಟ್ರೀಯ ಪರಿಷತ್ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.
ಇದಕ್ಕೂ ಮುನ್ನ ಹೆಚ್ ಡಿ ದೇವೇಗೌಡರು ಕಾರ್ಯಕಾರಣಿ ಸಮಿತಿ ಸಭೆಗೆ ಚಾಲನೆ ನೀಡಿದರು. ಸಮಿತಿ ಸದಸ್ಯರಾದ ಬಿ. ಎಂ ಫಾರೂಕ್, ಜಫ್ರುಲ್ಲಾ ಖಾನ್, ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ ಸಿ. ಎಂ ಇಬ್ರಾಹಿಂ, ಬಂಡೆಪ್ಪ ಕಾಶೆಂಪೂರ್, ಕೇರಳದ ಇಂಧನ ಸಚಿವ ಕೃಷ್ಣನ್ ಕುಟ್ಟಿ, ಕೇರಳದ ಮಾಜಿ ಸಚಿವರು, ಹಾಲಿ ಶಾಸಕರು ಸೇರಿದಂತೆ 13 ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.
ಮಾಜಿ ಪ್ರಧಾನಿ ದೇವೇಗೌಡರೆ ಮತ್ತೆ ರಾಷ್ಟ್ರೀಯ ಅಧ್ಯಕ್ಷರಾಗಬೇಕೆಂಬುದು ಎಲ್ಲ ರಾಜ್ಯ ಪ್ರತಿನಿಧಿಗಳು ಒಮ್ಮತ ಅಭಿಪ್ರಾಯವನ್ನು ಸಭೆಯಲ್ಲಿ ವ್ಯಕ್ತಪಡಿಸಿದರು. ಇದರ ಜೊತೆಗೆ 2023ರ ವಿಧಾನಸಭೆ ಚುನಾವಣೆ ಹಾಗೂ 2024ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ದೇವೇಗೌಡರನ್ನೇ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡುವುದು ಸೂಕ್ತ ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಓದಿ:ದೇವೇಗೌಡರನ್ನು ಭೇಟಿಯಾದ ಸಿದ್ದರಾಮಯ್ಯ; ಆರು ವರ್ಷದ ಬಳಿಕ ಗುರು ಶಿಷ್ಯರ ಸಮಾಗಮ