ಬೆಂಗಳೂರು: ರಾಜ್ಯದ ಉತ್ತರ ಭಾಗದ ಹಲವು ಜಿಲ್ಲೆಗಳು, ಕರಾವಳಿ ಪ್ರದೇಶ, ಮಲೆನಾಡು ಪ್ರದೇಶಗಳಲ್ಲಿ ಸಾವಿರಾರು ಹಳ್ಳಿಗಳು ಜಲಾವೃತವಾಗಿವೆ. ನೊಂದ ಸಂತ್ರಸ್ತರ ಜೀವನ ಪುನಃ ರೂಪಿಸುವಲ್ಲಿ ನನ್ನ ಮತ್ತು ನಮ್ಮ ಪಕ್ಷದ ಪೂರ್ಣ ಸಹಕಾರ ಮತ್ತು ಬೆಂಬಲ ಇದೆ ಎಂದು ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಹೇಳಿದ್ದಾರೆ.
ಸಿಎಂಗೆ ಪತ್ರ ಬರೆದಿರುವ ಮಾಜಿ ಪ್ರಧಾನಿ ದೇವೇಗೌಡ ಸಿಎಂಗೆ ಪತ್ರ ಬರೆದಿರುವ ಮಾಜಿ ಪ್ರಧಾನಿ ದೇವೇಗೌಡ ಈ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಇಂದು ಪತ್ರ ಬರೆದಿರುವ ಅವರು, ನೊಂದ ಸಂತ್ರಸ್ತರನ್ನು ಸಕಾಲದಲ್ಲಿ ಕಾಪಾಡುವುದು, ಅವರ ನೆರವಿಗೆ ಧಾವಿಸುವುದು ಮತ್ತು ಪರಿಹಾರ ನೀಡುವುದು ಸರ್ಕಾರದ ಪ್ರಥಮ ಮತ್ತು ಆದ್ಯ ಕರ್ತವ್ಯ. ಆದರೆ ಈ ಅಗಾಧ ಪ್ರಮಾಣದ ದುರಂತವನ್ನು ನಿಭಾಯಿಸುವುದು ಕಷ್ಟ ಸಾಧ್ಯ. ಇದರಲ್ಲಿ ಕೆಲವೊಮ್ಮೆ ಲೋಪ-ದೋಷಗಳು ಮತ್ತು ನ್ಯೂನ್ಯತೆಗಳು ಕಂಡುಬರುವುದು ಸಹಜ. ಆದರೆ, ಇಂತಹ ವಿಷಮ ಪರಿಸ್ಥಿತಿಯಲ್ಲಿ ಯಾವುದೇ ರಾಜಕಾರಣ ಬೆರೆಸದೆ ಸಂತ್ರಸ್ತರ ನೆರವಿಗೆ ಧಾವಿಸುವುದು ಪ್ರತಿಯೊಬ್ಬ ಕನ್ನಡಿಗರ ಆದ್ಯ ಕರ್ತವ್ಯವಾಗಿದೆ.
ಈ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಜಿಲ್ಲಾಡಳಿತವನ್ನು ಚುರುಕುಗೊಳಿಸಿ, ನುರಿತ, ಅನುಭವಿ ಮತ್ತು ಕ್ರಿಯಾಶೀಲ ಅಧಿಕಾರಿಗಳನ್ನು ಪ್ರವಾಹ ಬಾಧಿತ ಜಿಲ್ಲೆಗಳಲ್ಲಿ ನಡೆಯುವ ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗೆ ನೇಮಿಸಬೇಕು. ದಾನಿಗಳಿಂದ ಮತ್ತು ಸಂಘ ಸಂಸ್ಥೆಗಳಿಂದ ಬರುವ ಸಾಮಗ್ರಿಗಳನ್ನು ಮತ್ತು ಇತರೆ ರೀತಿಯ ಸಹಾಯಗಳನ್ನು ವ್ಯವಸ್ಥಿತ ರೀತಿಯಲ್ಲಿ ಸಮಯೋಚಿತವಾಗಿ ವಿತರಿಸಬೇಕು ಎಂದು ಮನವಿ ಮಾಡಿದ್ದಾರೆ.
ತಾವು ಏಕಾಂಗಿಯಾಗಿ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟಿರುವುದನ್ನು ಮಾಧ್ಯಮಗಳ ಮೂಲಕ ನಾನು ಸಹ ಗಮನಿಸಿದ್ದೇನೆ. ಜೊತೆಗೆ ಅಧಿಕಾರಿಗಳು ಸಹಕರಿಸುತ್ತಿರುವುದನ್ನು ಸೂಕ್ಷ್ಮವಾಗಿ ಗ್ರಹಿಸಿದ್ದೇನೆ. ಅಲ್ಲದೇ ಈ ಬೃಹತ್ ಪ್ರಮಾಣದ ಪರಿಹಾರ ಕಾರ್ಯಗಳನ್ನು ರಾಜ್ಯ ಸರ್ಕಾರ ಒಂದೇ ನಿಭಾಯಿಸುವುದು ಕಷ್ಟ ಸಾಧ್ಯ. ಈ ಹಿನ್ನೆಲೆಯಲ್ಲಿ ನಾನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದಲ್ಲಿ ತಲೆದೋರಿರುವ ಈ ನೆರೆ ಹಾವಳಿಯನ್ನು “ರಾಷ್ಟ್ರೀಯ ವಿಪತ್ತು” ಎಂದು ಘೋಷಿಸಬೇಕು. ಹಾಗೂ ತುರ್ತು ಪರಿಹಾರ ಕಾರ್ಯಗಳಿಗೆ ಕನಿಷ್ಠ 5 ಸಾವಿರ ಕೋಟಿ ರೂ.ಗಳನ್ನು ತುರ್ತಾಗಿ ಬಿಡುಗಡೆ ಮಾಡಬೇಕೆಂದು ಆ. 11ರಂದು ಪತ್ರ ಬರೆದಿದ್ದೇನೆ. ಈ ನಿಟ್ಟಿನಲ್ಲಿ ನಿಮ್ಮ ಸರ್ಕಾರ ಕೈಗೊಳ್ಳುವ ಯೋಜನೆಗಳು ಯಶಸ್ವಿಯಾಗಲೆಂದು ಹಾರೈಸುತ್ತೇನೆ ಎಂದು ಗೌಡರು ಪತ್ರದಲ್ಲಿ ತಿಳಿಸಿದ್ದಾರೆ.