ಬೆಂಗಳೂರು: ಒಂದೆಡೆ ಸರ್ಕಾರಗಳು ಮಕ್ಕಳ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳನ್ನು ತಂದು ಹಲವಾರು ಸೌಲಭ್ಯಗಳನ್ನು ಕಲ್ಪಿಸುತ್ತಿದ್ದರೆ, ಇನ್ನೊಂದೆಡೆ ಅದೆಷ್ಟೋ ಮಕ್ಕಳು ಕತ್ತಲೆಯ ಪಾಲಾಗಿವೆ. ಶೋಷಣೆಗೀಡಾಗಿ ಅವುಗಳ ಭವಿಷ್ಯ ಅರಳುವ ಮೊದಲೇ ಬಾಡಿ ಹೋಗಿದೆ. ಈ ದಿನವನ್ನು ಅಂತಹ ಮಕ್ಕಳಿಗೆಂದೇ ಮೀಸಲಿಡಲಾಗಿದೆ.
ಹಣಕ್ಕಾಗಿಯೋ ತಮ್ಮ ಅನುಕೂಲತೆಗಾಗಿಯೋ ಕೆಲ ಬಲವಾದ ವರ್ಗಗಳು ದೇಶದಲ್ಲಿನ ಲಕ್ಷಾಂತರ ಮಕ್ಕಳ ಮೇಲೆ ನಿರಂತರ ದೌರ್ಜನ್ಯ ಎಸಗುತ್ತಿವೆ. ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ (ಎನ್ ಸಿಆರ್ ಬಿ) 2017ರ ಅಂಕಿ ಅಂಶವು ದೇಶದಲ್ಲಿ ಪ್ರತಿ ಹತ್ತು ನಿಮಿಷಕ್ಕೊಮೆ ಒಂದು ಮಗು ನಾಪತ್ತೆಯಾಗುತ್ತಿದೆ ಎಂಬ ಆತಂಕಕಾರಿ ವರದಿ ನೀಡಿತ್ತು. ಅದೇ ಮುಂದುವರೆದ ವರ್ಷಗಳಲ್ಲಿಯೂ ಮಕ್ಕಳು ನಾಪತ್ತೆಯಾಗುವವರ ಸಂಖ್ಯೆಯಲ್ಲಿ ಇನ್ನೂ ಅಧಿಕವೇ ಆಗಿದೆ.
ರಾಜ್ಯದಲ್ಲಿ 2018ರ ಎನ್ಸಿಆರ್ಬಿ ವರದಿ ಪ್ರಕಾರ 677 ಗಂಡು ಹಾಗೂ 946 ಹೆಣ್ಣು ಮಕ್ಕಳು ಸೇರಿ ಒಟ್ಟು 1,623 ಮಕ್ಕಳು ಕಾಣೆಯಾಗಿದ್ದಾರೆ. ಇನ್ನೂ 2017ರಲ್ಲಿಯೂ 1,241 ಮಕ್ಕಳು ನಾಪತ್ತೆಯಾಗಿದ್ದರು.
ರಾಜ್ಯದಲ್ಲಿ ಮಕ್ಕಳ ಅಪಹರಣ, ದೌರ್ಜನ್ಯ, ಕೊಲೆ ಸೇರಿದಂತೆ 2018 ರಲ್ಲಿ 6,131 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 2,043 ಕಿಡ್ನ್ಯಾಪ್ ಪ್ರಕರಣಗಳೇ ಆಗಿವೆ.
ಈ ಕುರಿತಂತೆ ಈಟಿವಿ ಭಾರತ್ನೊಂದಿಗೆ ರಾಜ್ಯ ಮಕ್ಕಳ ಆಯೋಗದ ಮಾಜಿ ಅಧ್ಯಕ್ಷ ವೈ. ಮರಿಸ್ವಾಮಿ ಮಾತನಾಡಿ 'ಕೆಲಸ ಕೊಡಿಸುವ ಸೋಗಿನಲ್ಲಿ ಹಣದಾಸೆ ತೋರಿಸಿ ಮಕ್ಕಳನ್ನು ತಮ್ಮತ್ತ ಸೆಳೆದುಕೊಂಡು ದುಡ್ಡು ಮಾಡುವ ಮಾಫಿಯಾ ನಗರದ ಪ್ರದೇಶಗಳಲ್ಲಿ ಬೇರೂರಿದೆ. ಅದರಲ್ಲೂ ಆಸ್ಪತ್ರೆಗಳಲ್ಲಿ ಆಗತಾನೇ ಹುಟ್ಟಿದ ಮಗುವನ್ನು ಕಳ್ಳತನ ಮಾಡಿ ಬೇರೆಯವರಿಗೆ ಮಾರಾಟ ಮಾಡಿ ಹಣಗಳಿಸುವ ದಂಧೆಗಳಿಗೇನು ಕಡಿಮೆಯಿಲ್ಲ. ಮಕ್ಕಳ ಮೇಲೆ ನಡೆಯುತ್ತಿರುವ ಅಪರಾಧ ಪ್ರಕರಣಗಳೆಡೆಗೆ ಪೊಲೀಸ್ ಇಲಾಖೆ ಗಮನಹರಿಸುತ್ತಿಲ್ಲ ಎಂದು ದೂರಿದರು.
ಅಷ್ಟೇ ಅಲ್ಲದೇ, ಈ ಬಗ್ಗೆ ಕಾನೂನು ಸೇವಾ ಪ್ರಾಧಿಕಾರ, ರಾಜ್ಯ ಮಕ್ಕಳ ರಕ್ಷಣಾ ಆಯೋಗ, ಜಿಲ್ಲಾಮಟ್ಟದಲ್ಲಿ ಮಕ್ಕಳ ರಕ್ಷಣಾ ಘಟಕಗಳು ಸ್ಥಳೀಯರಲ್ಲಿ ಮಕ್ಕಳ ಸಾಗಾಣಿಕೆ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ರಾಜ್ಯಮಟ್ಟದಲ್ಲಿ ಸೂಕ್ತ ಅರಿವು ಮೂಡಿಸಿದಾಗ, ತಪ್ಪಿತಸ್ಥರಿಗೆ ಶಿಕ್ಷೆಯಾದಾಗ ಮಾತ್ರ ಮಕ್ಕಳ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸಬಹುದು ಎಂದು ಅಭಿಪ್ರಾಯಪಟ್ಟರು.