ಬೆಂಗಳೂರು :ರಾಜ್ಯ ವಿಧಾನಸಭೆ ಚುನಾವಣೆಯ ಕಾವು ಏರುತ್ತಿದ್ದು, ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ನಾಯಕ ಹೆಚ್.ಡಿ.ದೇವೇಗೌಡರು ನಾಳೆಯಿಂದ(ಮಂಗಳವಾರ) ಚುನಾವಣಾ ಅಖಾಡಕ್ಕೆ ಧುಮುಕಲಿದ್ದಾರೆ. ಕಾಲಿನ ಊತ, ಮಂಡಿ ನೋವಿಂದ ಬಳಲುತ್ತಿದ್ದ ಗೌಡರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ವಿಶ್ರಾಂತಿಯಲ್ಲಿದ್ದರು. ಕಳೆದ ಮೂರ್ನಾಲ್ಕು ದಿನಗಳಿಂದ ದೆಹಲಿಯಲ್ಲಿ ಇದ್ದು, ಅಧಿವೇಶನದಲ್ಲಿ ಭಾಗವಹಿಸಿದ್ದರು.
ಯುವಕನಂತೆ ಮೈಕೊಡವಿಕೊಂಡು ಎದ್ದಿರುವ ದೇವೇಗೌಡರು, ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ರಾಜ್ಯ ಚುನಾವಣೆಯ ಪ್ರಯುಕ್ತ ಏಪ್ರಿಲ್ 11ರಿಂದ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ. ಜೆಡಿಎಸ್ ಪ್ರಬಲವಾಗಿರುವ ಹಳೆ ಮೈಸೂರು ಭಾಗದ ಮಂಡ್ಯ, ಹಾಸನ, ಕೋಲಾರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ರಾಮನಗರ, ತುಮಕೂರು ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ.
ಇದೇ ವೇಳೆ ಉತ್ತರ ಕರ್ನಾಟಕದ ರಾಯಚೂರು, ವಿಜಯಪುರ ಜಿಲ್ಲೆಗಳಿಗೂ ಪ್ರಚಾರಕ್ಕೆ ತೆರಳುವುದಾಗಿ ಗೌಡರು ತಿಳಿಸಿದರು. ಹಾಸನ, ಕಡೂರು ಮತ್ತಿತರ ಕ್ಷೇತ್ರಗಳಲ್ಲಿ ಹೆಚ್.ಡಿ.ರೇವಣ್ಣ ಕೆಲಸ ಮಾಡಲಿದ್ದಾರೆ ಎಂದರು. ಚುನಾವಣೆಯ ನಂತರ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಜತೆಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಗೌಡರು ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ಪ್ರಣಾಳಿಕೆ ಸಿದ್ದ:ಪ್ರಸಕ್ತ ಚುನಾವಣೆಗೆ ಜಾತ್ಯತೀತ ಜನತಾದಳದ ಪ್ರಣಾಳಿಕೆ ಸಿದ್ಧವಾಗಿದ್ದು, ಪ್ರಣಾಳಿಕಾ ರಚನಾ ಸಮಿತಿಯ ಮಹತ್ವದ ಸಭೆ ಇಂದು ನಡೆಯಿತು. ವಿಧಾನ ಪರಿಷತ್ ಸದಸ್ಯ ಬಿ.ಎಂ.ಫಾರೂಕ್ ಅಧ್ಯಕ್ಷತೆಯ ಸಮಿತಿಯು, ಪ್ರಣಾಳಿಕೆಯ ಕರಡು ಪ್ರತಿಯನ್ನು ಪರಾಮರ್ಶೆ ನಡೆಸಿತು. ಅಲ್ಲದೆ, ಪಕ್ಷದ ವತಿಯಿಂದ ಜನತೆಗೆ ನೀಡಲು ಉದ್ದೇಶಿಸಿರುವ ಜೆಡಿಎಸ್ ಪರಿಹಾರ ಪತ್ರದ ಬಗ್ಗೆಯೂ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಸಮಿತಿಯ ಸದಸ್ಯರಾದ ಮಾಜಿ ಸಚಿವರಾದ ಬಂಡೆಪ್ಪ ಕಾಷೆಂಪೂರ್, ಮಾಜಿ ಸಂಸದರಾದ ಕುಪೆಂದ್ರ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಕೆ.ಎನ್.ತಿಪ್ಪೇಸ್ವಾಮಿ ಮತ್ತಿತರರು ಭಾಗವಹಿಸಿದ್ದರು.