ಬೆಂಗಳೂರು: ಕೇಂದ್ರ ಸರ್ಕಾರ ಕೋವಿಡ್-19 ಪರಿಹಾರಕ್ಕೆ 20 ಲಕ್ಷ ಕೋಟಿ ರೂ. ಘೋಷಿಸಿದ್ದು, ಇದರಲ್ಲಿ ಎಷ್ಟು ಮೊತ್ತವನ್ನು ಬಿಡುಗಡೆ ಮಾಡಿದೆ ಎನ್ನುವುದನ್ನು ತಿಳಿಸಬೇಕು ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಆಗ್ರಹಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಯಾವ್ಯಾವ ರಾಜ್ಯಗಳಿಗೆ ಎಷ್ಟು ಮೊತ್ತ ಬಿಡುಗಡೆ ಮಾಡಲಾಗಿದೆ ಎನ್ನುವುದನ್ನು ಕೇಂದ್ರ ಸರ್ಕಾರ ತಿಳಿಸಬೇಕು. ಅಲ್ಲದೆ ಈ ನಿಟ್ಟಿನಲ್ಲಿ ಕೇಂದ್ರದಿಂದ ಯಾವ ರೀತಿ ಕ್ರಮ ಕೈಗೊಳ್ಳಲಾಗಿದೆ ಎಂಬುದನ್ನು ವಿವರಿಸಬೇಕು. ಜನರ ದಾರಿ ತಪ್ಪಿಸುವುದಕ್ಕೆ ಸರ್ಕಾರ ದೊಡ್ಡ ಮೊತ್ತ ಘೋಷಿಸಿದೆ. 20 ಲಕ್ಷ ಕೋಟಿ ರೂ.ನಲ್ಲಿ ಶೇ. 80ರಷ್ಟು ಮೊತ್ತ ಬ್ಯಾಂಕ್ಗಳ ಮೇಲೆ ಬಿಡಲಾಗಿದೆ ಎಂದರು.
ನಂತರ ಮಾತು ಮುಂದುವರೆಸಿ, ಆರ್ಎಸ್ಎಸ್ನ ದತ್ತಾತ್ರೇಯ ಹೊಸಬಾಳೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಯುದ್ಧದ ವೇಳೆ ಪ್ರತಿಪಕ್ಷಗಳು ಸರ್ಕಾರದ ಜತೆ ನಿಲ್ಲಬೇಕು ಎಂದಿದ್ದಾರೆ. ಇನ್ನೆಷ್ಟು ದಿನ ನಾವು ಸಹಕಾರ ನೀಡಬೇಕು? ಜನವರಿಯಲ್ಲಿ ಕೊರೊನಾ ದೇಶವನ್ನು ಪ್ರವೇಶಿಸಿದೆ. ಆದರೆ ಮಾರ್ಚ್ವರೆಗೂ ಕುಂಭಕರ್ಣ ನಿದ್ದೆಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವಿಗೆ ಏನನ್ನುತ್ತೀರಿ? ನೀವು ಆಗ ಏನು ಮಾಡುತ್ತಿದ್ದೀರಿ? ವೈರಸ್ ಇರುವ ಸಂದರ್ಭ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ಕರೆಸುವ ಅವಶ್ಯಕತೆ ಇತ್ತಾ ಎಂದು ಪ್ರಶ್ನಿಸಿದ್ದಾರೆ.
ಮಧ್ಯಪ್ರದೇಶ ಸರ್ಕಾರವನ್ನು ನಿಭಾಯಿಸುವ ಕಾರ್ಯದಲ್ಲಿ ತೊಡಗಿದ್ದಾರಾ? ಅಥವಾ ಉದ್ದೇಶಪೂರ್ವಕವಾಗಿಯೇ ದೇಶದಲ್ಲಿ ವೈರಸ್ ಜಾಸ್ತಿ ಆಗಲಿ ಎನ್ನುವ ಉದ್ದೇಶ ಇತ್ತಾ? ಆರ್ಎಸ್ಎಸ್ ಮುಖ್ಯಸ್ಥರಾಗಿ ನೀವು ಯಾಕೆ ಸುಮ್ಮನಿದ್ದೀರಿ ಎನ್ನುವುದನ್ನು ವಿವರಿಸುತ್ತೀರಾ? 3.4ನಿಂದ 4ರಷ್ಟಿದ್ದ ಜಿಡಿಪಿ ಶೂನ್ಯಕ್ಕೆ ತಲುಪಿದೆ. ಈಗ ಬೆಂಬಲ ನೀಡಿ ಎಂದು ಕೇಳುತ್ತಿದ್ದೀರಿ. ಯಾವ ರೀತಿಯ ಬೆಂಬಲ ನೀಡೋಣ ಎಂದು ಪ್ರಶ್ನೆಗಳನ್ನ ಮುಂದಿಟ್ಟರು.
ದಮನಕಾರಿ ಪ್ರವೃತ್ತಿಯನ್ನು ನಾವು ಸಹಿಸುವುದಿಲ್ಲ:ಎಐಸಿಸಿ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಸಾಗರದಲ್ಲಿ ದೂರು ದಾಖಲಾಗಿದೆ. ಕರ್ನಾಟಕದಲ್ಲಿ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಈ ಪ್ರಕರಣ ದಾಖಲಿಸಿದ್ದಾರೆ ಎಂದು ದತ್ತಾತ್ರೇಯ ಹೊಸಬಾಳೆ ವಿರುದ್ಧ ಆರೋಪ ಮಾಡಿದ ಉಗ್ರಪ್ಪ, ಇದು ನಿಮ್ಮ ತವರು ತಾಲೂಕಿನಲ್ಲಿ ನಡೆದಿದೆ. ಇದರ ಹಿಂದೆ ನಿಮ್ಮ ಕುಮ್ಮಕ್ಕಿದೆಯೇ? ಇಂತಹ ದಮನಕಾರಿ ಪ್ರವೃತ್ತಿಯನ್ನು ನಾವು ಸಹಿಸುವುದಿಲ್ಲ. ನೆಲದ ಕಾನೂನು ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಬದ್ಧತೆ ಇದ್ದರೆ ಸಾಗರದಲ್ಲಿ ನಿನ್ನೆ ದಾಖಲಾಗಿರುವ ಪ್ರಕರಣ ವಾಪಸ್ ಪಡೆಯಬೇಕು ಎಂದರು.
ಒಬ್ಬ ಪೊಲೀಸ್ ಅಧಿಕಾರಿಯನ್ನು ಪುಸಲಾಯಿಸಿ ಪೂರ್ವಾಪರ ಯೋಚಿಸದೆ ಪ್ರಕರಣ ದಾಖಲಿಸಲು ಪ್ರೇರೇಪಿಸಲಾಗಿದೆ. ಈ ಅಧಿಕಾರಿಯನ್ನು ಅಮಾನತುಗೊಳಿಸಬೇಕು. ಅವರ ಮೇಲೆ ಕಾನೂನು ಉಲ್ಲಂಘನೆ ಪ್ರಕರಣ ದಾಖಲಿಸಿ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸುತ್ತೇನೆ. ಈ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿ ದೂರು ಸಲ್ಲಿಸಲಾಗಿದೆ ಎಂದು ತಿಳಿಸಿದರು.