ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ವಿ.ಎಸ್.ಉಗ್ರಪ್ಪ ಬೆಂಗಳೂರು : ರಾಜ್ಯ ಹಾಗೂ ರಾಷ್ಟ್ರ ರಾಜಕಾರಣದಲ್ಲಿ ಆತಂಕಕಾರಿ ಬೆಳವಣಿಗೆ ನಡೆಯುತ್ತಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು. ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪಿ.ಆರ್.ರಮೇಶ್, ರಾಮಚಂದ್ರಪ್ಪ, ಎಚ್.ಎಂ.ರೇವಣ್ಣ ಜತೆ ಭಾನುವಾರ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜಕಾರಣಿಗಳು ಎಲ್ಲರಿಗೂ ಮಾದರಿಯಾಗಿರಬೇಕು. ಆದರ್ಶಪ್ರಾಯವಾದ ಮೌಲ್ಯಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು. ನೈಜ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸಬೇಕು ಎಂದರು.
ಭಾರತೀಯ ಸಂವಿಧಾನ ಪ್ರಕಾರ ದೇಶದಲ್ಲಿ ಚುನಾವಣೆಗಳು ಆಗಬೇಕು. ಈ ಮೂಲಕ ಸರ್ಕಾರಗಳು ಅಧಿಕಾರಕ್ಕೆ ಬರಬೇಕೆ ಎನ್ನುವುದು ಅಂಬೇಡ್ಕರ್ ಮತ್ತು ಗಾಂಧೀಜಿ ಮತ್ತು ಎಲ್ಲಾ ಹಿರಿಯ ನಾಯಕರುಗಳ ಆಶಯವಾಗಿದೆ ಎಂದು ಹೇಳಿದರು. ಆದರೆ ಇಂದು ಆಘಾತಕಾರಿ ಸಂಗತಿಗಳು ರಾಜಕಾರಣದಲ್ಲಿ ನಡೆಯುತ್ತಿವೆ. ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಅವರು ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ.
ಈ ಆಡಿಯೋದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಒಂದು ರೀತಿಯ ರೌಡಿಸಂ ಮಾಡುವ ಪ್ರವೃತ್ತಿ ಹೊಂದಿದ್ದಾರೆ ಎಂದು ಹೇಳಿದ್ದಾರೆ. ಅಂದರೆ ಬಿಜೆಪಿ ಒಂದು ರೀತಿಯಲ್ಲಿ ರೌಡಿ ಮೋರ್ಚಾ ಎಂದು ಯೋಗೇಶ್ವರ ಹೇಳಿದ್ದಾರೆ ಎನ್ನಲಾದ ಆಡಿಯೋದಲ್ಲಿ ಇದೆ. ದೇಶವನ್ನು ರಕ್ಷಣೆ ಮಾಡಬೇಕಾದ ಗೃಹ ಸಚಿವರೇ ರೌಡಿ ಮೋರ್ಚಾ ಕಟ್ಟುತ್ತಿದ್ದಾರೆ. ಆದರೆ ಈ ವಾದವನ್ನು ಯೋಗೇಶ್ವರ್ ಅವರು ತಳ್ಳಿಹಾಕಿದ್ದಾರೆ. ಆಡಿಯೋ ಅವರದ್ದಲ್ಲ ಎಂದಾದರೆ ಕೇಸು ದಾಖಲಿಸಬಹುದಿತ್ತು. ಇನ್ನೊಂದು ಆಯಾಮದಲ್ಲಿ ನೋಡುವುದಾದರೆ ಯೋಗೇಶ್ವರ್ ಹೇಳಿದ್ದಾರೆ ಎನ್ನಲಾದ ಆಡಿಯೋ ಕೇಳಿದರೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂದು ನಿಶ್ಚಿತವಾಗಿದೆ ಎಂದು ಹೇಳಿದರು.
'ಚುನಾವಣೆಗೂ ಮುನ್ನವೇ ಆಪರೇಷನ್ ಕಮಲ':ನಾವು ಮುಂದೆ ಅಧಿಕಾರಕ್ಕೆ ಬರಲ್ಲ ಎಂಬುದು ಬಿಜೆಪಿಗೆ ಖಾತ್ರಿಯಾಗಿದೆ. ಹೀಗಾಗಿ ಆಪರೇಷನ್ ಕಮಲದ ತಯಾರಿ ಮಾಡುತ್ತಿದ್ದಾರೆ. ಚುನಾವಣೆಗೆ ಮುಂಚಿತವಾಗಿಯೇ ಬಿಜೆಪಿ ಜನಾದೇಶಕ್ಕೆ ವಿರುದ್ಧವಾಗಿ ಆಪರೇಷನ್ ಕಮಲದ ತಯಾರಿ ಮಾಡುತ್ತಿದ್ದಾರೆ. ಯೋಗೇಶ್ವರ ಒಬ್ಬ ಅನುಭವಿ ರಾಜಕಾರಣಿ. ಅಮಿತ್ ಶಾ ರೌಡಿಸಂ ಬಗ್ಗೆ ಜನರ ಮುಂದಿಟ್ಟಿದ್ದಾರೆ. ಇದರಿಂದ ಯೋಗೇಶ್ವರ್ ಇತಿಹಾಸದ ಪುಟಗಳಲ್ಲಿ ಸೇರಿಕೊಳ್ಳಲಿದ್ದಾರೆ. ಮಿಸ್ಟರ್ ಮೋದಿ ಅವರೇ ಯೋಗೇಶ್ವರ್ ಹೇಳಿಕೆಗೆ ನಿಮ್ಮ ನಿಲುವೇನು?. ಯೋಗೇಶ್ವರ್ ಬಗ್ಗೆ ಆರ್ಎಸ್ಎಸ್ ನಿಲುವೇನು ಅನ್ನುವುದನ್ನು ಹೇಳಬೇಕು ಎಂದು ಒತ್ತಾಯಿಸಿದರು.
'ಯತ್ನಾಳ್-ನಿರಾಣಿ ವಿರುದ್ಧ ಕ್ರಮ ಕೈಗೊಳ್ಳಬೇಕು':ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಕ್ಯಾಬಿನೆಟ್‌ನಲ್ಲಿ ಪಿಂಪ್ ಮಂತ್ರಿ ಒಬ್ಬರು ಇದ್ದಾರೆ ಎಂದು ಹೇಳುತ್ತಾರೆ. ಇದಕ್ಕೆ ಸಚಿವ ಮುರುಗೇಶ್ ನಿರಾಣಿ ಅವರು, ನಾವು ಇಲ್ಲಿವರೆಗೂ ಸುಮ್ಮನಿದ್ದೇನೆ. ಮುಂದುವರೆದರೆ ನಾಲಿಗೆ ಕತ್ತರಿಸುತ್ತೇವೆ ಎಂದು ಹೇಳಿದ್ದಾರೆ. ನಿರಾಣಿ ಅವರು ಹೇಳಿರುವ ಈ ಮಾತಿಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಈ ಮಾತಿಗೆ ಸುಮೋಟೋ ಕೇಸ್ ದಾಖಲಿಸಬಹುದು. ಇನ್ನು ನಿರಾಣಿಯವರು ಯತ್ನಾಳ್ ಅವರ ಕಾರು ಚಾಲಕನ ಕೊಲೆ ಹೇಗೆ ಆಗಿದೆ ಎಂದು ಪ್ರಶ್ನಿಸಿದ್ದಾರೆ. ಈ ಕೇಸ್ ಅನ್ನು ಸರ್ಕಾರ ಮುಚ್ಚಿ ಹಾಕಿದೆ. ಈ ಪ್ರಕರಣದ ಬಗ್ಗೆ ಸರ್ಕಾರ ತನಿಖೆ ಮಾಡಬೇಕು. ಇದೇ ಪರಿಸ್ಥಿತಿಯಾದರೆ ರಾಜ್ಯದ ಜನರ ಕಥೆ ಏನು ಎಂದು ಪ್ರಶ್ನಿಸಿದರು.
ಇದನ್ನೂ ಓದಿ :ನನ್ನ ಧ್ವನಿ ಎಂದು ಹೇಳಲ್ಲ, ವೈಯಕ್ತಿಕವಾಗಿ ಮಾತನಾಡಿರಬಹುದು: ವೈರಲ್ ಆಡಿಯೋ ಬಗ್ಗೆ ಯೋಗೇಶ್ವರ್ ಪ್ರತಿಕ್ರಿಯೆ