ಬೆಂಗಳೂರು: ಇಸ್ರೋ ವಿಜ್ಞಾನಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಮತ್ತು ಭೂಮಿ ನೀಡುವಂತೆ ಕೋರಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸಿಎಂ ಸಿದ್ದರಾಮಯ್ಯಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಪತ್ರದಲ್ಲಿ ಆ.23 ರಂದು ವಿಶ್ವವೇ ಬೆರಗಾಗುವಂತೆ ಇಸ್ರೋ ಸಂಸ್ಥೆಯ ವಿಜ್ಞಾನಿಗಳು ಚಂದ್ರಯಾನ-3ಅನ್ನು ಅತ್ಯಂತ ಯಶಸ್ವಿಯಾಗಿ ಉಡಾಯಿಸಿ, ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿಸಿ ಅಲ್ಲಿಯ ವಿದ್ಯಮಾನಗಳ ಬಗ್ಗೆ ಮಾಹಿತಿಯನ್ನು ಪಡೆಯುತ್ತಿರುವುದು ಅತ್ಯಂತ ಪ್ರಶಂಸನೀಯ. ಅಷ್ಟೇ ಅಲ್ಲದೆ ನಮ್ಮ ದೇಶದ ಕೀರ್ತಿಯ ಅಜರಾಮರವಾಗುವಂತೆ ಮಾಡುವಲ್ಲಿ ನಮ್ಮ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಈ ಮಹತ್ತರ ಕಾರ್ಯದಲ್ಲಿ ಭಾಗಿಯಾದವರು ಬೆಂಗಳೂರಿನ ಇಸ್ರೋ ಸಂಸ್ಥೆಯ ವಿಜ್ಞಾನಿಗಳೆಂಬುದು ಕರ್ನಾಟಕದ ಜನತೆ ಹೆಮ್ಮೆಪಡುವ ವಿಷಯವಾಗಿದೆ ಎಂದು ತಿಳಿಸಿದ್ದಾರೆ.
ತಾವು ಸೇರಿದಂತೆ ರಾಷ್ಟ್ರದ ಪ್ರಧಾನಿಗಳು ಹಾಗೂ ಇನ್ನಿತರರು ಬೆಂಗಳೂರಿನ ಇಸ್ರೋ ಸಂಸ್ಥೆಗೆ ಭೇಟಿ ನೀಡಿ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿರುವುದು ಮತ್ತು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ, ಇಸ್ರೋ ವಿಜ್ಞಾನಿಗಳಿಗೆ ಸನ್ಮಾನ ಸಮಾರಂಭ ರೂಪಿಸುತ್ತೇವೆ ಎಂದು ಹೇಳಿರುವುದು ಸ್ವಾಗತಾರ್ಹ ವಿಷಯವಾಗಿದೆ ಎಂದು ಉಲ್ಲೇಖಿಸಿದ್ದಾರೆ.
ಇಂತಹ ಅವಿಸ್ಮರಣೀಯ ಸಾಧನೆ ಮಾಡಿರುವ ಇಸ್ರೋ ವಿಜ್ಞಾನಿಗಳಿಗೆ ಎಷ್ಟು ಅಭಿನಂದಿಸಿದರೂ ಸಾಲದು. ಅವರಿಗೆ ಏನೇ ಕೊಡುಗೆ ನೀಡಿದರೂ ಅದು ಕಡಿಮೆಯೆ. ಆದರೂ ಇಂತಹ ಮಹಾನ್ ಸಾಧನೆ ಮಾಡಿರುವ ನಮ್ಮ ಹೆಮ್ಮೆಯ ಇಸ್ರೋ ವಿಜ್ಞಾನಿಗಳನ್ನು ಮತ್ತಷ್ಟು ಉತ್ತೇಜಿಸಿಸಲು ದಯಮಾಡಿ ಇಸ್ರೋ ಸಂಸ್ಥೆಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಣೆ ಮಾಡಬೇಕು ಎಂದು ಹಾಗೂ ಇಸ್ರೋ ಸಂಸ್ಥೆಯ ವಿಜ್ಞಾನಿಗಳಿಗೆ ವಸತಿ ಸಮುಚ್ಚಯ ರೂಪಿಸಲು ಬೆಂಗಳೂರಿನ ಅಕ್ಕಪಕ್ಕದಲ್ಲಿ 25 ಎಕರೆ ಜಮೀನನ್ನು ಸರ್ಕಾರದಿಂದ ನೀಡಿ ಅವರನ್ನು ಪ್ರೋತ್ಸಾಹಿಸಬೇಕಾಗಿ ತಮ್ಮಲ್ಲಿ ಅತ್ಯಂತ ವಿನಯಪೂರ್ವಕವಾಗಿ ಕೋರುತ್ತೇನೆ ಎಂದು ಮನವಿ ಮಾಡಿದ್ದಾರೆ.
ಆಗಸ್ಟ್ 23ರಂದು ಚಂದ್ರಯಾನ 3ರ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ದಕ್ಷಿಣ ಧ್ರುವದಲ್ಲಿ ಸೇಫ್ ಲ್ಯಾಂಡ್ ಮಾಡಿಸುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆ ಇತಿಹಾಸ ನಿರ್ಮಿಸಿತ್ತು. ಕಳೆದ ಜುಲೈ 14ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ ಗಗನನೌಕೆಯನ್ನು ಇಸ್ರೋ ವಿಜ್ಞಾನಿಗಳು ಯಶಸ್ವಿಯಾಗಿ ಉಡಾಯಿಸಿದ್ದರು. ಇದಾದ 41 ದಿನಗಳ ಬಳಿಕ ಲ್ಯಾಂಡರ್ ಅನ್ನು ಸುರಕ್ಷಿತವಾಗಿ ಇಳಿಸಲಾಗಿತ್ತು. ಚಂದ್ರಯಾನ-3 ಯೋಜನೆ 14 ದಿನಗಳ ಮಿಷನ್ ಆಗಿತ್ತು. ರೋವರ್ ಮತ್ತು ಲ್ಯಾಂಡರ್ ಅನ್ನು ಸೂರ್ಯನಿಂದ ಪಡೆಯುವ ಸೌರಶಕ್ತಿಯಿಂದ ಕಾರ್ಯನಿರ್ವಹಿಸುವಂತೆ ವಿನ್ಯಾಸಗೊಳಿಸಲಾಗಿತ್ತು.
ಇದನ್ನೂ ಓದಿ:ವಿಕ್ರಂ ಲ್ಯಾಂಡರ್ ಪೆಲೋಡ್ಗಳು ಸ್ವಿಚ್ಡ್ ಆಫ್, ರಿಸಿವರ್ ಆನ್: ಹೊಸ ಫೋಟೋ ಹಂಚಿಕೊಂಡ ಇಸ್ರೋ