ಬೆಂಗಳೂರು:ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪೈಪೋಟಿ ನಡೆಯುತ್ತಿದ್ದು, ಈ ಬಾರಿ ಅಲ್ಲಿ ಕಮಲ ಅರಳಿಸುತ್ತೇವೆ. ಮಂಡ್ಯದಲ್ಲಿ ಬಿಜೆಪಿ ಕಟ್ಟಲು ಸಿದ್ಧನಿದ್ದೇನೆ ಎಂದು ಮಂಡ್ಯದ ಮಾಜಿ ಸಂಸದ ಹಾಗು ಹಿರಿಯ ನಾಯಕ ಎಲ್.ಆರ್. ಶಿವರಾಮೇಗೌಡ ತಿಳಿಸಿದರು.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಶಿವರಾಮೇಗೌಡ, ಪುತ್ರ ಚೇತನ್, ಯೂಥ್ ಕಾಂಗ್ರೆಸ್ನಲ್ಲಿ ಸಕ್ರಿಯರಾಗಿದ್ದ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದ ಲೋಕೇಶ್ ನಾಯಕ್, ಕಲ್ಯಾಣ ಕರ್ನಾಟಕ ಭಾಗದ ವೈದ್ಯ ಹಾಗು ಕೋಲಿ ಸಮಾಜದ ಮುಖಂಡ ಯೋಗೇಶ್ ಬೆಸ್ತರ್, ರಾಮದುರ್ಗದ ಕಾಂಗ್ರೆಸ್ ಮುಖಂಡ ಕುರುಬ ಸಮುದಾಯದ ಚಿಕ್ಕರೇವಣ್ಣ ಬಿಜೆಪಿ ಸೇರ್ಪಡೆಯಾದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ, ಸಚಿವರಾದ ಡಾ. ಕೆ. ಸುಧಾಕರ್, ಕೆ. ಗೋಪಾಲಯ್ಯ, ಬಿ. ಶ್ರೀರಾಮುಲು ಅವರು ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು.
ಮಂಡ್ಯದಲ್ಲಿ ಕಮಲ ಅರಳಿಸುವೆ:ಬಿಜೆಪಿ ಸೇರಿದ ಬಳಿಕ ಮಾತನಾಡಿದ ಶಿವರಾಮೇಗೌಡ ಅವರು, ಬಿಜೆಪಿ ಶಿಸ್ತಿನ ಪಕ್ಷ. ಬೇರೆ ಪಕ್ಷಗಳ ಬಗ್ಗೆ ನಾನು ಮಾತಾಡಲ್ಲ. ನಾನು ಇದುವರೆಗೆ ಕಾಂಗ್ರೆಸ್- ಜೆಡಿಎಸ್ನಲ್ಲಿ ಪ್ರಬಲ ಹೋರಾಟ ಮಾಡಿ ಬೆಳೆದವನು. ಇವೆರಡೂ ಪಕ್ಷಗಳಲ್ಲಿ ಮಂಡ್ಯ ಭಾಗದಲ್ಲಿ ಉಸಿರುಗಟ್ಟುವ ವಾತಾವರಣ ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲೆಡೆ ಅಭಿವೃದ್ಧಿ ಮಾಡುತ್ತಿದ್ದಾರೆ. ಮಂಡ್ಯದ ನೆಲದಲ್ಲಿ ಮೋದಿ ಬಂದು ಬೃಹತ್ ಸಮಾವೇಶದಲ್ಲಿ ಪಕ್ಷ ಕಟ್ಟಲು ಕರೆ ಕೊಟ್ಟರು. ಮಂಡ್ಯದಲ್ಲಿ ಬಿಜೆಪಿ ಪಕ್ಷ ಕಟ್ಟಲು ನಾನು ಸಿದ್ಧ ಎಂದು ಪ್ರಕಟಿಸಿದರು.