ಬೆಂಗಳೂರು: ಎಐಸಿಸಿ ಕಾರ್ಯದರ್ಶಿಯಾಗಿ ನೇಮಕಗೊಂಡು, ಕೇರಳ ಉಸ್ತುವಾರಿ ವಹಿಸಿಕೊಂಡಿರುವ ಐವಾನ್ ಡಿಸೋಜ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಅಭಿನಂದಿಸಿದರು.
ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಐವಾನ್ ಡಿಸೋಜ ಅವರನ್ನು ಈ ಹಿಂದೆ ಸಿಎಂ ಆಗಿದ್ದ ಸಂದರ್ಭ ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಿಸಿದ್ದರು. ಆದರೆ ಕೆಲ ತಿಂಗಳುಗಳ ಹಿಂದೆ ಅವರ ಎಂಎಲ್ಸಿ ಕಾಲಾವಧಿ ಪೂರ್ಣಗೊಂಡಿದ್ದು, ವಿಧಾನಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಸಂಖ್ಯಾಬಲ ಕಡಿಮೆ ಇರುವ ಹಿನ್ನೆಲೆ ಇವರ ಮರು ಆಯ್ಕೆ ಸಾಧ್ಯವಾಗಿರಲಿಲ್ಲ.
ಓದಿ: ಈ ಬಾರಿಯೂ ಮಾರ್ಚ್ನಲ್ಲಿ ನಡೆಯಲ್ಲ ಎಸ್ಎಸ್ಎಲ್ಸಿ, ಪಿಯುಸಿ ಪರೀಕ್ಷೆ
ಸಿದ್ದರಾಮಯ್ಯ ತಮ್ಮ ಪ್ರಭಾವ ಬಳಸಿ ಸಾಕಷ್ಟು ಪ್ರಯತ್ನಿಸಿದರೂ ಕೊನೆಯ ಹಂತದಲ್ಲಿ ಎಐಸಿಸಿ ನಾಯಕರು ಐವಾನ್ ಡಿಸೋಜ ಬದಲು ಬಿ.ಕೆ.ಹರಿಪ್ರಸಾದ್ರನ್ನ ಆಯ್ಕೆ ಮಾಡಿದ್ದರು. ಇದರಿಂದ ಸಿದ್ದರಾಮಯ್ಯ ಪ್ರಯತ್ನಕ್ಕೆ ಹಿನ್ನಡೆಯಾಗಿತ್ತು. ಆದರೆ ಮಂಗಳೂರು ಭಾಗದ ಪ್ರಭಾವಿ ನಾಯಕರಾಗಿರುವ ಐವಾನ್ ಡಿಸೋಜರನ್ನು ಕೇರಳ ಉಸ್ತುವಾರಿಯನ್ನಾಗಿ ನೇಮಿಸಿ ಎಐಸಿಸಿ ಆದೇಶ ಹೊರಡಿಸಿದೆ.
ತಮ್ಮ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಸಿದ್ದರಾಮಯ್ಯರನ್ನು ಐವಾನ್ ಡಿಸೋಜಾ ಇಂದು ಅಭಿನಂದಿಸಿದ್ದಾರೆ. ಕೆಲವೇ ದಿನಗಳಲ್ಲಿ ಅವರು ಕೇರಳಕ್ಕೆ ತೆರಳಿ ಅಧಿಕಾರ ವಹಿಸಿಕೊಳ್ಳಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ರಾಷ್ಟ್ರೀಯ ಮಟ್ಟದ ಜವಾಬ್ದಾರಿ ಲಭಿಸುತ್ತಿರುವುದು ಗಮನಾರ್ಹ ಸಂಗತಿ.