ಬೆಂಗಳೂರು :ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪಕ್ಷಾಂತರ ಪರ್ವ ಆರಂಭವಾಗಿದೆ. ಈ ಸಂಬಂಧ ಮೂವರು ಮಾಜಿ ಶಾಸಕರು ಹಾಗೂ ಓರ್ವ ಮಾಜಿ ಮೇಯರ್ ಕಾಂಗ್ರೆಸ್ ಪಕ್ಷಕ್ಕೆ ಇಂದು ಅಧಿಕೃತವಾಗಿ ಸೇರ್ಪಡೆಯಾದರು. ನಗರದ ಕ್ವೀನ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರ ಸಮ್ಮುಖದಲ್ಲಿ ದೊಡ್ಡಬಳ್ಳಾಪುರ ಮಾಜಿ ಶಾಸಕ ಜೆ ನರಸಿಂಹಸ್ವಾಮಿ, ಕೊಳ್ಳೇಗಾಲದ ಬಿಜೆಪಿಯ ಮಾಜಿ ಶಾಸಕ ನಂಜುಂಡಸ್ವಾಮಿ ಹಾಗೂ ವಿಜಯಪುರದ ಮಾಜಿ ಪಕ್ಷೇತರ ಶಾಸಕ ಮನೋಹರ್ ಐನಾಪುರ್, ಮೈಸೂರು ಮಾಜಿ ಮೇಯರ್ ಪುರುಷೋತ್ತಮ್ ಅವರು ಕಾಂಗ್ರೆಸ್ ಸೇರ್ಪಡೆಯಾದರು.
ಮಾಜಿ ಶಾಸಕರು ಮತ್ತು ಮಾಜಿ ಮೇಯರ್ ಕಾಂಗ್ರೆಸ್ ಸೇರ್ಪಡೆ :ಈ ಸಂದರ್ಭ ಇವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಅಪಾರ ಸಂಖ್ಯೆಯ ಕಾರ್ಯಕರ್ತರು ಆಗಮಿಸಿದ್ದರು. ಅಭಿಮಾನಿಗಳು ವಿಶೇಷವಾಗಿ ಬ್ಯಾಂಡ್ಗಳನ್ನು ತರಿಸಿ ಗಮನ ಸೆಳೆದರು. ಜೊತೆಗೆ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಕಾರ್ಯಕ್ರಮದ ವೇಳೆ ಸಮಾರಂಭದ ವೇದಿಕೆಯ ಹಿಂಭಾಗ ಹಾಗೂ ಎದುರು ಭಾಗದಲ್ಲಿ ಅಪಾರ ಸಂಖ್ಯೆಯ ಕಾರ್ಯಕರ್ತರು ನೆರೆದಿದ್ದರು. ಈ ವೇಳೆ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಇದು ಸೇರ್ಪಡೆ ಸಮಾರಂಭ ಪಕ್ಷದ ಅಧಿಕೃತ ಕಾರ್ಯಕ್ರಮ. ಸಾರ್ವಜನಿಕ ಸಮಾವೇಶ ಅಲ್ಲ. ಇದರಿಂದಾಗಿ ಒಂದಿಷ್ಟು ಸಭ್ಯತೆಯಿಂದ ನಡೆದುಕೊಳ್ಳಿ ಎಂದು ಸಲಹೆ ಇತ್ತರು. ಆದರೆ ಇದನ್ನು ಅಭಿಮಾನಿಗಳು ಕಿವಿಗೆ ಹಾಕಿಕೊಳ್ಳಲಿಲ್ಲ.
ಬೆಳಗ್ಗೆ 10 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಕೊಂಚ ವಿಳಂಬವಾಗಿ ಆರಂಭವಾಯಿತು. ಕೆಪಿಸಿಸಿ ಕಚೇರಿ ಮುಂಭಾಗ ಪಕ್ಷ ಸೇರ್ಪಡೆಗೆ ಆಗಮಿಸಿದ್ದ ಮಾಜಿ ಶಾಸಕರ ಕಡೆಯವರು ಬ್ಯಾಂಡ್ ಮೇಳವನ್ನು ಆಯೋಜಿಸಿದ್ದರು. ನಿರಂತರವಾಗಿ ತಮಟೆ ಡ್ರಮ್ ಹಾಗೂ ಇತರ ವಾದನಗಳನ್ನು ನುಡಿಸಿದ ವಾದಕರು ಕಾಂಗ್ರೆಸ್ ಕಾರ್ಯಕರ್ತರನ್ನು ಹುರಿದುಂಬಿಸಿದರು.