ಬೆಂಗಳೂರು:ಯಲ್ಲಾಪುರ ಕ್ಷೇತ್ರದ ಮಾಜಿ ಶಾಸಕರಾದ ವಿ ಎಸ್ ಪಾಟೀಲ್ ಹಾಗೂ ಶ್ರೀನಿವಾಸ್ ಭಟ್ ಅವರು ಬಿಜೆಪಿ ತೊರೆದು ಇಂದು ಕಾಂಗ್ರೆಸ್ ಪಕ್ಷ ಸೇರಿದರು. ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಡಿ ಕೆ ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ವಿಧಾನಪರಿಷತ್ ಪ್ರತಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹಾಗೂ ಹಿರಿಯ ಮುಖಂಡ ಆರ್.ವಿ ದೇಶಪಾಂಡೆ ಅವರು ಪಕ್ಷದ ಧ್ವಜ ನೀಡುವ ಮೂಲಕ ಇಬ್ಬರನ್ನು ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಡಿಕೆಶಿ, ವಿ ಎಸ್ ಪಾಟೀಲ್ ಅವರು ನಮ್ಮ ಜತೆ ವಿಧಾನಸಭೆಯಲ್ಲಿ ಕೆಲಸ ಮಾಡಿದ್ದಾರೆ. ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಯಾಗಿದ್ದ ಸಂದರ್ಭದಲ್ಲಿ ಇವರಿಗೆ ಅತ್ಯುತ್ತಮ ಶಾಸಕ ಎಂಬ ಪ್ರಶಸ್ತಿ ನೀಡಿ, ಗೌರವಿಸಿದ್ದರು. ಅವರ ತಂದೆ ಕೂಡ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದವರು. ಇವರು ಕೂಡ ಪಕ್ಷದ ವಿವಿಧ ಸಂಘಟನೆಗಳಲ್ಲಿ ಕೆಲಸ ಮಾಡಿದ್ದರು. ಈ ಮಧ್ಯೆ ಬಿಜೆಪಿ ಸೇರಿ, ಸ್ಪರ್ಧಿಸಿದ್ದರು ಎಂದರು.
ಆಪರೇಷನ್ ಕಮಲದಲ್ಲಿ ನಮ್ಮ ಶಾಸಕರು ಹೋದ ನಂತರ ಆಯಾ ಕ್ಷೇತ್ರದ ಬಹುತೇಕ ಬಿಜೆಪಿ ನಾಯಕರು ನಮ್ಮ ಪಕ್ಷಕ್ಕೆ ಒಬ್ಬೊಬ್ಬರಾಗಿ ಬರುತ್ತಿದ್ದಾರೆ. ಇತ್ತೀಚೆಗೆ ಹಿರೇಕೆರೂರು ನಾಯಕರು ಸೇರ್ಪಡೆಯಾಗಿದ್ದಾರೆ. ಇವರು ನಮ್ಮ ಪಕ್ಷದ ಸಿದ್ಧಾಂತ, ಮಲ್ಲಿಕಾರ್ಜುನ ಖರ್ಗೆ ಅವರ ಅಧ್ಯಕ್ಷತೆ, ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ನಾಯಕತ್ವ ಒಪ್ಪಿ ಪಕ್ಷಕ್ಕೆ ಬಂದಿದ್ದಾರೆ. ಉತ್ತರ ಕನ್ನಡ ಜಿಲ್ಲಾ ಕಾಂಗ್ರೆಸ್, ಸ್ಥಳೀಯ ನಾಯಕರ ಜತೆ ಚರ್ಚಿಸಿ ಎಲ್ಲ ನಾಯಕರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದೇವೆ ಎಂದರು.
ಇನ್ನೂ ಬಹಳ ಅರ್ಜಿಗಳು ಬಾಕಿ ಇವೆ. ಇಂದು ಇನ್ನಿಬ್ಬರು ನಾಯಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳಬೇಕಾಗಿತ್ತ. ಅವರ ಆರೋಗ್ಯ ಸರಿ ಇಲ್ಲದ ಕಾರಣ ಸೇರ್ಪಡೆ ಕಾರ್ಯಕ್ರಮ ಮುಂದೂಡಿದ್ದೇವೆ. ಕೆಲವರು ಅಧಿವೇಶನ ಮುಗಿಯಲಿ ಎಂದು ಕಾಯುತ್ತಿದ್ದಾರೆ. ನಾವು ಮುಂದಿನ ದಿನಗಳಲ್ಲಿ ಪ್ರತಿವಾರ ಸಭೆ ಮಾಡಿ ಒಬ್ಬೊಬ್ಬರನ್ನೇ ಪಕ್ಷಕ್ಕೆ ಸೇರಿಸಿಕೊಳ್ಳುತ್ತೇವೆ. ಈ ಮಧ್ಯೆ ನಮ್ಮ ಪ್ರವಾಸಗಳು ನಿಗದಿಯಾಗಿವೆ. ಪ್ರವಾಸದ ಸಂದರ್ಭದಲ್ಲಿ ಕೆಲವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗುವುದು ಎಂದು ಹೇಳಿದರು.