ಬೆಂಗಳೂರು:ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರು ಹೃದಯಾಘಾತದಿಂದ ನಿಧನರಾಗಿದ್ದು, ವರ್ತೂರಿನಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆಯನ್ನು ನ.27ಕ್ಕೆ ಮುಂದೂಡಲಾಗಿದೆ.
ನಗರದ ಹೊರವಲಯದ ವರ್ತೂರು ರೆಸಾರ್ಟ್ನಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ಸಭೆ ನಡೆಯಬೇಕಿತ್ತು. ಈ ಸಭೆಯಲ್ಲಿ ಟಿಕೆಟ್ಗಾಗಿ ಅರ್ಜಿ ಸಲ್ಲಿಸಿದ್ದ ಗದಗ ಶಾಸಕರಾಗಿದ್ದ ಶ್ರೀಶೈಲಪ್ಪ ಬಿದರೂರು ಭಾಗಿಯಾಗಿದ್ದರು. ಅವರು ರೋಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಇದನ್ನೂ ಓದಿ:ವ್ಯಕ್ತಿ ಅಲ್ಲ, ಪಕ್ಷ ಮುಖ್ಯ, ಯಾರೇ ಆದ್ರೂ ಒಬ್ಬರಿಗೆ ಒಂದೇ ಟಿಕೆಟ್: ಡಿ.ಕೆ ಶಿವಕುಮಾರ್
ಶ್ರೀಶೈಲಪ್ಪ ಬಿದರೂರು ರಾಜಕೀಯ ಜೀವನ:
- 1994 – ವಿಧಾನಸಭಾ ಚುನಾವಣೆಯಲ್ಲಿ ರೋಣ ಮತಕ್ಷೇತ್ರದಿಂದ ಜನತಾದಳ ಟಿಕೆಟ್ ಮೇಲೆ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಿ.ಎಸ್. ಪಾಟೀಲ್ ವಿರುದ್ಧ ಗೆದ್ದರು.
- 1999 – ಜನತಾದಳ ಇಬ್ಭಾಗವಾದ ಹಿನ್ನೆಲೆಯಲ್ಲಿ ಜೆಡಿಎಸ್ ಸೇರ್ಪಡೆಯಾಗಿ ರೋಣ ಮತಕ್ಷೇತ್ರದಿಂದ ಜೆಡಿಎಸ್ ಟಿಕೆಟ್ ಮೇಲೆ ಸ್ಪರ್ಧಿಸಿ ಪರಾಭವಗೊಂಡರು.
- 2005 - ಭಾರತೀಯ ಜನತಾ ಪಕ್ಷ ಸೇರ್ಪಡೆಯಾಗಿ ಗದಗ ಜಿಲ್ಲೆ ಬಿಜೆಪಿ ಅಧ್ಯಕ್ಷರಾದ ಬಿದರೂರು.
- 2008 – ಗದಗ ವಿಧಾನಸಭಾ ಮತಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕಾಂಗ್ರೆಸ್ ಪಕ್ಷದ ಹೆಚ್.ಕೆ. ಪಾಟೀಲ ವಿರುದ್ಧ ಗೆಲುವು ಕಂಡರು.
- 2012 - ಹಾವೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ನೇತೃತ್ವದಲ್ಲಿ ನಡೆದ ಕರ್ನಾಟಕ ಜನತಾ ಪಕ್ಷದ ಸಮಾವೇಶದಲ್ಲಿ ಪಾಲ್ಗೊಂಡು ಕೆಜೆಪಿಗೆ ಬೆಂಬಲಿಸಿದ್ದ ಇವರು ಪುನಃ ತಮ್ಮ ನಡೆ ಬದಲಾಯಿಸಿ ಭಾರತೀಯ ಜನತಾ ಪಕ್ಷದಲ್ಲೇ ಮುಂದುವರೆದರು.
- 2013 – ಗದಗ ವಿಧಾನಸಭಾ ಮತಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೇವಲ 18,715 ಮತಗಳನ್ನು ಪಡೆದು ಹೆಚ್.ಕೆ. ಪಾಟೀಲ ವಿರುದ್ಧ ಸೋತರು.
- ಪೂರ್ವಪರ ಜನತಾ ದಳ ಮುಖಾಂತರ ರಾಜಕಾರಣ ಪ್ರಾರಂಭಿಸಿ ನಂತರ ಜೆಡಿಎಸ್ ಪಕ್ಷ ಸೇರಿ, ತದನಂತರ ಬಿಜೆಪಿ ಸೇರ್ಪಡೆಗೊಂಡು 2008ರಲ್ಲಿ ಗದಗ ವಿಧಾನಸಭಾ ಮತಕ್ಷೇತ್ರದ ಶಾಸಕರಾಗಿ ನಂತರ 2018ರಲ್ಲಿ ಬಿಜೆಪಿ ಟಿಕೆಟ್ ನಿರಾಕರಿಸಿದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು.
- ಶ್ರೀಶೈಲಪ್ಪ ಬಿದರೂರು ಅವರು 15.11.2022ರಂದು ಗದಗ/ರೋಣ ವಿಧಾನಸಭಾ ಮತಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿ ಅರ್ಜಿ ಸಲ್ಲಿಸಿದ್ದರು.