ಬೆಂಗಳೂರು:ರಾಜ್ಯ ಬಿಜೆಪಿಯ ಮಿಷನ್ 150 ಟಾಸ್ಕ್ ಭಾಗವಾಗಿ ಮಂಡ್ಯ, ಮೈಸೂರು, ಕೋಲಾರ, ಉಡುಪಿ ಜಿಲ್ಲೆಯಲ್ಲಿ ಬಿಜೆಪಿಯಿಂದ ಆಪರೇಷನ್ ಕಮಲ ಆರಂಭವಾದಂತಿದೆ. ಈ ಭಾಗಗಳಲ್ಲಿನ ಕಾಂಗ್ರೆಸ್, ಜೆಡಿಎಸ್ ನಾಯಕರು ಇಂದು ಅಧಿಕೃತವಾಗಿ ಕಮಲ ಪಡೆಗೆ ಸೇರ್ಪಡೆಯಾದರು.
ರಾಜಭವನದ ರಸ್ತೆಯಲ್ಲಿರುವ ಪರಾಗ್ ಹೋಟೆಲ್ನಲ್ಲಿ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ನಡೆಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಮ್ಮುಖದಲ್ಲಿ ಇಂದಷ್ಟೇ ಕಾಂಗ್ರೆಸ್ ತೊರೆದ ಉಡುಪಿ ನಾಯಕ ಪ್ರಮೋದ್ ಮಧ್ವರಾಜ್, ಮಾಜಿ ಸಚಿವ ವರ್ತೂರು ಪ್ರಕಾಶ್, ಮಾಜಿ ಶಾಸಕ ಮಂಜುನಾಥಗೌಡ, ಮಾಜಿ ಎಂಎಲ್ಸಿ ಸಂದೇಶ ನಾಗರಾಜ್, ಜೆಡಿಎಸ್ ನಾಯಕರಾದ ಮಾಜಿ ಐಆರ್‌ಎಸ್ ಅಧಿಕಾರಿ ಲಕ್ಷ್ಮಿ ಅಶ್ವಿನ್ ಗೌಡ ಹಾಗೂ ಮಾಜಿ ಸಚಿವ ಎಸ್.ಟಿ ಜಯರಾಮ್ ಪುತ್ರ ಅಶೋಕ್ ಜಯರಾಂ, ಕೆವಿ ಕೃಷ್ಣಮೂರ್ತಿ ಬಿಜೆಪಿ ಸೇರ್ಪಡೆಯಾದರು.
ಬಿಜೆಪಿ ಸೇರ್ಪಡೆಯಾದ ನಂತರ ಮಾತನಾಡಿದ ಮಾಜಿ ಎಂಎಲ್ಸಿ ಸಂದೇಶ್ ನಾಗರಾಜ್, ನಾನು ಇಷ್ಟು ದಿನ ಬಿಜೆಪಿಯಲ್ಲಿ ಅಕ್ರಮವಾಗಿದ್ದೆ ಇವತ್ತು ಸಕ್ರಮವಾಗಿದ್ದೇನೆ ನನ್ನಿಂದ ಬಿಜೆಪಿಗೂ ಒಳ್ಳೇದಾಗುತ್ತ, ಬಿಜೆಪಿಯಿಂದ ನನಗೂ ಒಳ್ಳೆಯದಾಗುತ್ತದೆ ಎಂದರು. ಮಾಜಿ ಐಆರ್‌ಎಸ್ ಅಧಿಕಾರಿ ಲಕ್ಷ್ಮಿ ಅಶ್ವಿನ್ ಗೌಡ ಮಾತನಾಡಿ, ನಾನು ಐಆರ್‌ಎಸ್ ಅಧಿಕಾರಿ ಆಗಿದ್ದವಳು, ವೈದ್ಯೆ ಕೂಡ ರಾಜಕೀಯ ವಲಯದಲ್ಲಿ ಸಮಾಜ ಸೇವೆಗೆ ಹೆಚ್ಚಿನ ಅವಕಾಶ ಇದೆ. ಹಾಗಾಗಿ 2018ರಲ್ಲಿ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕಾರಣಕ್ಕೆ ಬಂದೆ, ಆದರೆ ಆಗ ನನ್ನ ರಾಜಕೀಯ ಪ್ರವೇಶ ಫಲಪ್ರದ ಆಗಲಿಲ್ಲ. ಮೋದಿಯವರ ಆಡಳಿತ ರೋಮಾಂಚಕವಾಗಿದ್ದು, ಅನೇಕ ದಿಟ್ಟ ನಿರ್ಧಾರಗಳನ್ನು ಮೋದಿ ಕೈಗೊಂಡಿದ್ದಾರೆ. ಹಾಗಾಗಿ ಬಿಜೆಪಿಗೆ ಬಂದಿದ್ದೇನೆ ಎಂದರು.