ಬೆಂಗಳೂರು:ವಿಧಾನಸಭೆ ಚುನಾವಣೆ ಸಮೀಪದಲ್ಲಿ ಪಕ್ಷಾಂತರ ಮುಂದುವರೆದಿದ್ದು, ಕಾಂಗ್ರೆಸ್ ಟಿಕೆಟ್ ವಂಚಿತ ಮಾಜಿ ಶಾಸಕ ಕೊಳ್ಳೆಗಾಲ ಎಸ್ ಬಾಲರಾಜ್ ಬಿಜೆಪಿಗೆ ಸೇರ್ಪಡೆಯಾದರು. ಬಾಲರಾಜ್ಗೆ ಬಿಜೆಪಿ ಧ್ವಜ ನೀಡುವ ಮೂಲಕ ಪಕ್ಷದ ಸಂಸದೀಯ ಮಂಡಳಿ ಸದಸ್ಯ ಯಡಿಯೂರಪ್ಪ ಹಾಗೂ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪಕ್ಷಕ್ಕೆ ಬರ ಮಾಡಿಕೊಂಡರು. ಬಿಜೆಪಿಯಿಂದಲೇ ಚುನಾವಣಾ ರಾಜಕೀಯ ಆರಂಭಿಸಿದ್ದ ಬಾಲರಾಜ್ ಘರ್ ವಾಪಸಿ ಆಗಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಾಜಿ ಶಾಸಕ ಬಾಲರಾಜ್ ಬೆಂಬಲಿಗರ ಜೊತೆ ಬಿಜೆಪಿ ಸೇರಿದರು. ಪಕ್ಷಕ್ಕೆ ಸ್ವಾಗತಿಸಿ ಮಾತನಾಡಿದ ಯಡಿಯೂರಪ್ಪ, 'ಬಾಲರಾಜ್ ಬಿಜೆಪಿ ಸೇರಿದ್ದಾರೆ, ಚಾಮರಾಜನಗರ ಬಿಜೆಪಿಗೆ ಬಲ ಬಂದಂತಾಗಿದೆ. ಬಾಲರಾಜ್ ಮಾತ್ರ ಅಲ್ಲ, ಅವರ ಜೊತೆ ಅನೇಕ ಹಿರಿಯ ಮುಖಂಡರು ಬಂದಿದ್ದಾರೆ. ಎಲ್ಲರಿಗೂ ಸ್ವಾಗತ, ಕಾಂಗ್ರೆಸ್ ತೊರೆದು ಬಿಜೆಪಿಗೆ ಬಂದಿದ್ದಾರೆ. ಗೌರವದಿಂದ ಪಕ್ಷಕ್ಕೆ ಬರಮಾಡಿಕೊಳ್ಳುತ್ತಿದ್ದೇವೆ' ಎಂದರು.
'ಸಾಕಷ್ಟು ಬಲಿಷ್ಟ ಮುಖಂಡರು ಬಿಜೆಪಿ ಸೇರಿರುವುದು ನಮಗೆ ದೊಡ್ಡ ಶಕ್ತಿ ತಂದಿದೆ. ರಾಜ್ಯದಲ್ಲಿ ಬದಲಾವಣೆ ಗಾಳಿ ಬೀಸುತ್ತಿದ್ದು, ಕಾಂಗ್ರೆಸ್ ಸಂಪೂರ್ಣ ನೆಲಸಮ ಆಗಲಿದೆ. ಬಿಜೆಪಿ 135ರಿಂದ 140 ಕ್ಷೇತ್ರ ಗೆದ್ದು ಅಧಿಕಾರಕ್ಕೆ ಬರುವುದು ನಿಶ್ಚಿತ. ನಾಮಪತ್ರ ವಾಪಸ್ ದಿನಾಂಕದ ಬಳಿಕ ರಾಜ್ಯ ಪ್ರವಾಸ ಮಾಡಲಾಗುತ್ತದೆ' ಎಂದು ಬಿಎಸ್ವೈ ಹೇಳಿದರು.
'ಇಂದು ಅಮಿತ್ ಶಾ ರಾಜ್ಯಕ್ಕೆ ಬಂದಿದ್ದಾರೆ. ರಾಜ್ಯದ ಬಹುತೇಕ ಕ್ಷೇತ್ರಕ್ಕೆ ಮೋದಿ ಬಂದು ಪ್ರಚಾರ ನಡೆಸಲಿದ್ದಾರೆ. ಬಹುಮತ ಪಡೆದು ಸರ್ಕಾರ ರಚನೆ ಮಾಡುವುದರಲ್ಲಿ ಯಾವುದೇ ಸಂಶಯ ಇಲ್ಲ. ಅನೇಕ ಪ್ರಮುಖರು ಬಿಜೆಪಿ ಸೇರಲು ಸಂಪರ್ಕಿಸುತ್ತಿದ್ದಾರೆ. ತತ್ವ ಸಿದ್ಧಾಂತ ಒಪ್ಪಿ ಬರುವವರಿಗೆ ನಮ್ಮಲ್ಲಿ ಸ್ವಾಗತವಿದೆ. ಇಂದಿನಿಂದಲೇ ಕ್ಷೇತ್ರದಲ್ಲಿ ಕಾರ್ಯಪ್ರವೃತ್ತರಾಗಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಿ' ಎಂದು ಯಡಿಯೂರಪ್ಪ ಕರೆ ನೀಡಿದರು.