ಬೆಂಗಳೂರು:ಸಕಲೇಶಪುರ ತಾಲೂಕಿನ ಮಂಕನಹಳ್ಳಿ ಬಳಿ ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾಗಿದ್ದ ಕಲ್ಲಿನ ಸ್ತಂಭದ ಮಾಹಿತಿ ಫಲಕವನ್ನು ದುಷ್ಕರ್ಮಿಗಳು ವಿರೂಪಗೊಳಿಸಿದ್ದು ಕೂಡಲೇ ಅಗತ್ಯ ಮಾಹಿತಿ ಫಲಕ ಮರು ಅಳವಡಿಸಿ ಈ ಸ್ಥಳದ ಇತಿಹಾಸ ಜನರಿಗೆ ತಿಳಿಯುವಂತೆ ಮಾಡಬೇಕು ಎಂದು ಜಲಸಂಪನ್ಮೂಲ ಇಲಾಖೆಗೆ ಮಾಜಿ ಸಚಿವ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಿಂದ ಸಕಲೇಶಪುರ ಅರಕಲಗೂಡು-ಸೋಮವಾರಪೇಟೆಗಳನ್ನು ಸಂಪರ್ಕಿಸುವ ಕೂಡುರಸ್ತೆಯನ್ನು ಸೇರಲು ಬಿಸಿಲೆ ಘಾಟ್ ರಸ್ತೆ ಇದೆ. ಇದು ಶಿರಾಡಿ ಘಾಟ್ ರಸ್ತೆಗೆ ಪರ್ಯಾಯ ರಸ್ತೆಯೂ ಹೌದು. ಸಕಲೇಶಪುರ ತಾಲೂಕಿಗೆ ಸೇರುವ ಮಂಕನಹಳ್ಳಿ ಬಳಿ ಈ ರಸ್ತೆಯಲ್ಲಿ ಒಂದು ಅದ್ಭುತವಾದ ಜಾಗವಿದೆ. ಬ್ರಿಟೀಷರವರ ಆಡಳಿತವಿದ ಸಮಯದಲ್ಲಿ ಈ ಜಾಗದಲ್ಲಿ ಒಂದು ಕಲ್ಲಿನ ಸ್ತಂಭವನ್ನು ನಿಲ್ಲಿಸಲಾಗಿದ್ದು, ಇದಕ್ಕೆ ರಿಡ್ಜ್ ಎಂದು ಕರೆಯಲಾಗುತ್ತದೆ.
ಇಲ್ಲಿ ಬೀಳುವ ಮಳೆ ನೀರು ಕಲ್ಲಿನ ಪಶ್ಚಿಮ ಭಾಗಕ್ಕೆ ಹರಿದರೆ ಅರಬ್ಬಿ ಸಮುದ್ರವನ್ನು ಪೂರ್ವ ಭಾಗಕ್ಕೆ ಹರಿದರೆ ಬಂಗಾಳ ಕೊಲ್ಲಿಯನ್ನು ತಿಳಿಸುವ ಬಹಳ ವಿಶಿಷ್ಟವಾದ ಐತಿಹಾಸಿಕ ಸ್ತಂಭದ ಜಾಗವಿದು. ಅತ್ಯಂತ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ನಿಲ್ಲಿಸಿರುವ ಕಲ್ಲು ಸ್ತಂಭವಿದು. ಪ್ರಾಯಶಃ ಇಂತಹ ಸ್ಥಳಗಳು ನಮ್ಮ ದೇಶದಲ್ಲಿ ಅಪರೂಪ. ಇದರ ಪಕ್ಕದಲ್ಲಿಯೇ ವಿಶ್ವೇಶ್ವರಯ್ಯ ನೀರಾವರಿ ನಿಗಮದ ವತಿಯಿಂದ ನಿರ್ಮಿಸಿರುವ ರಸ್ತೆಯೂ ಇದೆ.
ಇಂತಹ ಸ್ಥಳಗಳನ್ನು ಉಳಿಸಿಕೊಳ್ಳುವುದು ಹಾಗು ಈ ಸ್ಥಳದ ವೈಶಿಷ್ಟ್ಯತೆಯನ್ನು ಜನರಿಗೆ ತಿಳಿಯಪಡಿಸುವುದು ನಮ್ಮ ಕರ್ತವ್ಯವಾಗಿದೆ. ಆದರೆ ಇಲ್ಲಿಯ, ಮಾಹಿತಿ ಫಲಕವನ್ನು ಯಾರೋ ದುರುಳರು ವಿರೂಪಗೊಳಿಸಿರುವುದರಿಂದ ಈ ಸ್ಥಳದ ಮಹಿಮೆ ಯಾರಿಗೂ ಗೊತ್ತಾಗುತ್ತಿಲ್ಲ. ಆದ್ದರಿಂದ ತಮ್ಮ ಇಲಾಖೆಯ ಕಡೆಯಿಂದ ಈ ವಿಶಿಷ್ಟ ಜಾಗಕ್ಕೆ ದೊರೆಯಬೇಕಾದ ವಿಶಿಷ್ಟ ಸ್ಥಾನವನ್ನು ನೀಡಿ ಈ ಜಾಗದ ಸೌಂದರೀಕರಣ ವಿವರವಾದ ಮಾಹಿತಿ ಫಲಕಗಳನ್ನು ಅಳವಡಿಸಬೇಕೆಂದು ಕೋರಿ ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳಗೆ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ.
ಇದನ್ನೂ ಓದಿ:ಆರ್ ಪುರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ.. ಸಚಿವರಿಗೆ ಬಡಾವಣೆ ನಿವಾಸಿಗಳಿಂದ ಮುತ್ತಿಗೆ