ಬೆಂಗಳೂರು :ಎರಡು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಉಪಚುನಾವಣೆ ಫಲಿತಾಂಶ ಗಮನಿಸಿದಾಗ ಅಲ್ಪಸಂಖ್ಯಾತರು ಜೆಡಿಎಸ್ ಪಕ್ಷವನ್ನು ನಂಬುತ್ತಿಲ್ಲ ಎನ್ನುವುದು ಸಾಬೀತಾಗಿದೆ ಎಂದು ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ.
ಹಾನಗಲ್‌ನಲ್ಲಿ ಜೆಡಿಎಸ್ 4ನೇ ಸ್ಥಾನಕ್ಕೆ ಕುಸಿದಿದೆ :ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಹಾನಗಲ್ ಹಾಗೂ ಸಿಂದಗಿ 2 ಕ್ಷೇತ್ರದಲ್ಲಿಯೂ ಜೆಡಿಎಸ್ ಪಕ್ಷ ಠೇವಣಿ ಕಳೆದುಕೊಂಡಿದೆ.
ವಿಪರ್ಯಾಸ ಎಂದರೆ ಹಾನಗಲ್‌ನಲ್ಲಿ ಪಕ್ಷೇತರ ಅಭ್ಯರ್ಥಿಗಿಂತ ಕಡಿಮೆ ಮತ ಪಡೆದು ಜೆಡಿಎಸ್ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ದುರಂತ ಎಂದರೆ ಕಾಂಗ್ರೆಸ್ನಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರ ಆಪರೇಷನ್ ಮಾಡಿ, ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಿ ಆತನ ರಾಜಕೀಯ ಭವಿಷ್ಯವನ್ನು ಮಣ್ಣು ಪಾಲು ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಂದಿನ ದಿನಗಳಲ್ಲಿ ಜೆಡಿಎಸ್ಗೆ ಯಾವುದೇ ಭವಿಷ್ಯ ಇಲ್ಲ :ಪಕ್ಷದ ಎಲ್ಲ ನಾಯಕರು ಒಂದಾಗಿ ಪ್ರಚಾರ ಕಾರ್ಯದಲ್ಲಿ ನಿರತರಾಗುವ ಮೂಲಕ ಒಗ್ಗಟ್ಟಿನ ಮಂತ್ರ ಜಪಿಸಿದ್ದರು. ಇದರಿಂದಲೇ ಗೆಲುವು ಸಾಧ್ಯವಾಯಿತು. ಹಾನಗಲ್ ವಿಧಾನಸಭೆ ಕ್ಷೇತ್ರವನ್ನು ಗೆದ್ದಿದ್ದು ಮಾತ್ರವಲ್ಲ ಸಿಂದಗಿಯಲ್ಲಿ ಸಹ ಕಳೆದ ಚುನಾವಣೆಗಿಂತ 40 ಸಾವಿರ ಮತಗಳನ್ನು ಹೆಚ್ಚುವರಿಯಾಗಿ ನಮ್ಮ ಅಭ್ಯರ್ಥಿ ಪಡೆದಿದ್ದಾರೆ.