ಕರ್ನಾಟಕ

karnataka

ETV Bharat / state

ನವೆಂಬರ್​ನಲ್ಲಿ ಬೃಹತ್ ಕಾರ್ಯಕರ್ತರ ಸಭೆಗೆ ವಿ.ಸೋಮಣ್ಣ ತೀರ್ಮಾನ; ಬಿಜೆಪಿಯಲ್ಲಿ ಸಂಚಲನ - V Somanna Holds Karyakarthas Meeting in November

ನವೆಂಬರ್​ ತಿಂಗಳಲ್ಲಿ ಕಾರ್ಯಕರ್ತರ ಬೃಹತ್​ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

former-minister-v-somanna-holds-karyakarthas-meeting-in-november
ನವೆಂಬರ್​ನಲ್ಲಿ ಬೃಹತ್ ಕಾರ್ಯಕರ್ತರ ಸಭೆಗೆ ಸೋಮಣ್ಣ ನಿರ್ಧಾರ: ಬಿಜೆಪಿಯಲ್ಲಿ ಸಂಚಲನ

By ETV Bharat Karnataka Team

Published : Oct 2, 2023, 6:22 PM IST

ಬೆಂಗಳೂರು :ಮುಂದಿನ ತಿಂಗಳು ಬೃಹತ್ ಕಾರ್ಯಕರ್ತರ ಸಭೆ ನಡೆಸಿ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ರಾಜಕೀಯ ನಡೆಯನ್ನು ಪ್ರಕಟಿಸುತ್ತೇನೆ. ಕಾರ್ಯಕರ್ತರ ಅಭಿಪ್ರಾಯಕ್ಕೆ ಮನ್ನಣೆ ಕೊಡುವ ನಿರ್ಧಾರ ಕೈಗೊಳ್ಳುವೆ ಎಂದು ಮಾಜಿ ಸಚಿವ ವಿ.ಸೋಮಣ್ಣ ತಿಳಿಸಿದರು. ಈ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ‌.

ವಿಜಯನಗರದಲ್ಲಿರುವ ಕಚೇರಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಮಾಜಿ ಪ್ರಧಾನಿ ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿ ಅಚರಣೆ ನಡೆಯಿತು. ಗಾಂಧಿ ಮತ್ತು ಶಾಸ್ತ್ರಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಸೋಮಣ್ಣ ಎಲ್ಲರಿಗೂ ಸಿಹಿ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿ, ಲಾಲ್ ಬಹುದ್ದೂರ್ ಶಾಸ್ತ್ರಿಯವರು ದೇಶ ಕಂಡ ಅಮೂಲ್ಯ ರತ್ನಗಳು. ಸೂರ್ಯ, ಚಂದ್ರ ಇರುವವರಗೆ ಈ ಮಹಾನ್ ನಾಯಕರುಗಳು ಹೆಸರು ಚಿರಸ್ಥಾಯಿಯಾಗಿ ಉಳಿಯಲಿದೆ ಎಂದರು.

ನನಗೆ ರಾಜಕೀಯವಾಗಿ ಅನ್ಯಾಯ:ನಾನು ಪಕ್ಷದ ಶಿಸ್ತಿನ ಸಿಪಾಯಿ. ಹಾಗಾಗಿ ರಾಷ್ಟ್ರಿಯ ನಾಯಕರ ಆದೇಶ ಮೇರೆಗೆ ಬೆಂಗಳೂರು ನಗರದಿಂದ ಹೊರಗೆ ಸ್ಪರ್ಧಿಸುವಂತಾಯಿತು. ಆದರೆ ಇಂದು ನನಗೆ ಅನ್ಯಾಯವಾಗಿದೆ. ಅದನ್ನು ಸರಿಪಡಿಸುವುದು ಪಕ್ಷದ ಹಿರಿಯ ನಾಯಕರ ಕರ್ತವ್ಯ ಎಂದು ಸೂಕ್ತ ಸ್ಥಾನಮಾನದ ಅಪೇಕ್ಷೆ ವ್ಯಕ್ತಪಡಿಸಿದರು.

ವರುಣಾ ಕ್ಷೇತ್ರದಲ್ಲಿ 18 ಬೂತ್​ಗಳಲ್ಲಿ ಕುರುಬ ಸಮುದಾಯದವರು ಹೆಚ್ಚಿನ ಮತದಾರರು ಇದ್ದಾರೆ. ಅಲ್ಲಿ ನನಗೆ ಅತಿ ಹೆಚ್ಚು ಮತ ನೀಡಿದರು. ಮತದಾರರನ್ನು ಕೇಳಿದರೆ ನಮ್ಮ ಕ್ಷೇತ್ರದಲ್ಲಿ ಕನಕ ಭವನ ನಿರ್ಮಾಣ ಮಾಡಬೇಕು ಎಂದು ಆಶಯದಿಂದ ಮತ ನೀಡಿದ್ದೇವೆ ಎಂದಿರುವುದಾಗಿ ಹೇಳಿದರು.

1968ರಲ್ಲಿ ಬೆಂಗಳೂರು ನಗರಕ್ಕೆ ಬಂದೆ. 45 ವರ್ಷಗಳ ಸುದೀರ್ಘ ರಾಜಕಾರಣ ಮಾಡಿದ್ದು, ಎಲ್ಲ ಧರ್ಮ, ವರ್ಗದವರನ್ನು ಸಮಾನವಾಗಿ ಕಂಡಿದ್ದೇನೆ. ಈಗ ನನಗೆ ರಾಜಕೀಯವಾಗಿ ಅನ್ಯಾಯವಾಗಿದೆ. ಹಾಗಾಗಿ ನವಂಬರ್​ನಲ್ಲಿ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಸುತ್ತೇನೆ. ಸಮಾವೇಶದಲ್ಲಿ ಕಾರ್ಯಕರ್ತರ ಅಭಿಪ್ರಾಯ ಪಡೆದು ನಿರ್ಧಾರ ಕೈಗೊಳ್ಳಲಿದ್ದೇನೆ ಎಂದರು.

ಸದ್ಯ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಬೇಡಿಕೆಯನ್ನು ಸೋಮಣ್ಣ ಹೈಕಮಾಂಡ್ ಮುಂದಿಟ್ಟಿದ್ದಾರೆ. ರಾಜ್ಯ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಜೊತೆ ಮುನಿಸಿಕೊಂಡಿರುವ ಸೋಮಣ್ಣ ಹೈಕಮಾಂಡ್ ನಾಯಕರ ಜೊತೆ ನೇರವಾಗಿ ಮಾತುಕತೆ ನಡೆಸಿ ತಮ್ಮ ಅಪೇಕ್ಷೆ ವ್ಯಕ್ತಪಡಿಸಿದ್ದಾರೆ. ಆದರೆ ಹೈಕಮಾಂಡ್ ಈವರೆಗೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಸೋಮಣ್ಣಗೆ ರಾಜ್ಯಾಧ್ಯಕ್ಷ ಸ್ಥಾನ ನೀಡುವುದು ಅನುಮಾನ ಎನ್ನಲಾಗಿದೆ. ಹಾಗಾಗಿ ಕಾರ್ಯಕರ್ತರ ಸಮಾವೇಶಕ್ಕೆ ಮುಂದಾಗಿದ್ದಾರೆ.

ಬಿಜೆಪಿಯಲ್ಲಿ ಸಂಚಲನ:ಆಪರೇಷನ್ ಹಸ್ತದ ಚಟುವಟಿಕೆಗಳು ಬಿರುಸುಗೊಂಡಿರುವ ನಡುವೆ ಸೋಮಣ್ಣ ಹೇಳಿಕೆ ರಾಜ್ಯ ಬಿಜೆಪಿ ವಲಯದಲ್ಲಿ ಸಂಚಲನ ಮೂಡಿಸಿದೆ. ಈ ವಿಚಾರದಲ್ಲಿ ರಾಜ್ಯ ನಾಯಕರು ಹಾಗು ಹೈಕಮಾಂಡ್ ನಾಯಕರು ಯಾವ ರೀತಿ ಮಧ್ಯಪ್ರವೇಶ ಮಾಡಲಿದ್ದಾರೆ ಎಂದು ಕಾದು ನೋಡಬೇಕಿದೆ.

ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಯುವ ಮುಖಂಡರಾದ ಡಾ.ಅರುಣ್ ಸೋಮಣ್ಣ, ಮಂಡಲ ಅಧ್ಯಕ್ಷ ವಿಶ್ವನಾಥಗೌಡ, ಮಾಜಿ ಮಹಾನಗರ ಪಾಲಿಕೆ ಸದಸ್ಯರುಗಳಾದ ಮೋಹನ್ ಕುಮಾರ್, ದಾಸೇಗೌಡ, ರೂಪಲಿಂಗೇಶ್ವರ್ ಪಲ್ಲವಿ ಚನ್ನಪ್ಪ, ರಾಜೇಶ್ವರಿ, ಬಿಜೆಪಿ ಮುಖಂಡರುಗಳಾದ ಸಿ.ಎಂ.ರಾಜಪ್ಪ, ಕಿಟ್ಚಿ, ಡೊಡ್ಡಯ್ಯ,ವೇಣು ಮತ್ತು ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರುಗಳು ಭಾಗವಹಿಸಿದ್ದರು.

ಇದನ್ನೂ ಓದಿ:ಗಾಂಧೀಜಿ ಅವಮಾನಿಸುವವರ ವಿರುದ್ಧ ಕಾನೂನು ಕ್ರಮಕ್ಕೆ ಚಿಂತನೆ: ಸಚಿವ ಹೆಚ್.ಕೆ.ಪಾಟೀಲ್

ABOUT THE AUTHOR

...view details