ಬೆಂಗಳೂರು : ಕುಸುಮಾ ಧಾರ್ಮಿಕ ವಿಧಿ ಪ್ರಕಾರ ಡಿ.ಕೆ. ರವಿಯವರನ್ನು ಮದುವೆಯಾಗಿದ್ದಾರೆ. ಅವರು ಗಂಡನ ಹೆಸರು ಹಾಕಿಕೊಳ್ಳುವುದು ಬೇಡ ಅಂದರೆ ಹೇಗೆ ಎಂದು ಸಂಸದೆ ಶೋಭಾ ಕರಂದ್ಲಾಜೆಗೆ ಮಾಜಿ ಸಚಿವೆ ಉಮಾಶ್ರೀ ಪ್ರಶ್ನಿಸಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ನಾಯಕಿಯರ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಡಿ.ಕೆ.ರವಿಯವರ ಹೆಸರು ಬಳಸದಂತೆ ಕುಸುಮ ಹನುಮಂತರಾಯಪ್ಪಗೆ ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಆ ರೀತಿ ಹೇಳುವ ಹಕ್ಕು ಯಾರಿಗೂ ಇಲ್ಲ. ಕುಸುಮಾ ವೈಫ್ ಆಫ್ ಡಿ.ಕೆ.ರವಿ. ಇದನ್ನು ಹೇಳಬೇಕು ತಾನೇ..?. ನೋವುಂಡವರ ನೋವು ಅವರಿಗೆ ಮಾತ್ರ ಗೊತ್ತು. ಶೋಭಾ ಕರಂದ್ಲಾಜೆ ಒಂದೇ ದಿಕ್ಕಿನಲ್ಲಿ ಯೋಚಿಸಬಾರದು. ಸಣ್ಣ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡ ಹೆಣ್ಣು ಮಗಳು ಕುಸುಮಾ, ಅವರ ನೋವು ಯಾರಿಗೆ ಅರ್ಥವಾಗುತ್ತೆ. ನೋವನ್ನು ಮರೆತು ಸಾಮಾಜಿಕ ಸೇವೆಗೆ ಬಂದಿದ್ದಾರೆ. ಅಂಥವರ ಬಗ್ಗೆ ಹೀಗೆ ಹೇಳಿಕೆ ನೀಡುವುದು ಸರಿಯಲ್ಲ ಎಂದರು.
ಕೆಪಿಸಿಸಿ ಮಹಿಳಾ ನಾಯಕಿಯರ ಸುದ್ದಿಗೋಷ್ಠಿ ಸತ್ತವರ ಹೆಸರನ್ನು ಬಳಸಿಕೊಂಡು ರಾಜಕೀಯ ಮಾಡಿದವರಿದ್ದಾರೆ. ಶೋಭಾ ಅವರೇ, ನೀವೇನು ಜ್ಯೋತಿಷಿಯಲ್ಲ. ಒಬ್ಬ ಸಂಸದೆಯಾಗಿ ನೀವು ಮಾತನಾಡಿ. ಯಾವುದೇ ಪಕ್ಷದ ಹೆಣ್ಣುಮಗಳಿರಲಿ, ಅವರ ಬಗ್ಗೆ ಇಂತಹ ಚರ್ಚಾ ವಿಷಯ ಮಾಡಬೇಡಿ. ನೀವು ಅಭಿವೃದ್ಧಿಹೀನ ಸರ್ಕಾರ ಇಟ್ಟುಕೊಂಡವರು. ನಿಮ್ಮ ಭ್ರಷ್ಟಾಚಾರ, ಕೊರೊನಾ ನಿರ್ವಹಣೆಯಲ್ಲಿ ವೈಫಲ್ಯಗಳನ್ನು ಮುಚ್ಚಿ ಹಾಕಲು ಇಂತಹ ವಿಷಯಗಳನ್ನು ಎಳೆದು ತರುತ್ತಿದ್ದೀರ. ಮತದಾರರನ್ನ ಓಲೈಸುವ ಕೆಲಸ ಮಾಡಿ, ಈ ರೀತಿ ಅಪಪ್ರಚಾರ ಮಾಡುವುದು ಸರಿಯಲ್ಲ. ನೀವು ಅಪಪ್ರಚಾರ ಮಾಡಿದರೆ, ನಾವು ಕೂಡ ಅದೇ ಮಾರ್ಗ ತುಳಿಯಬಹುದು. ಆದರೆ, ಕಾಂಗ್ರೆಸ್ ಪಕ್ಷ ಅಂತಹ ಕೆಲಸ ಮಾಡುವುದಿಲ್ಲ. ರಾಜಕಾರಣಕ್ಕೆ ಯಾರು ಬೇಕಾದರೂ ಬರಬಹುದು, ಆ ಹಕ್ಕು ಎಲ್ಲರಿಗೂ ಇದೆ. ಕಲಿತ ಹೆಣ್ಣು ಮಗಳಿಗೆ ಗೌರವ ಕೊಡುವುದನ್ನು ಕಲಿಯಿರಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜಕೀಯದಲ್ಲಿ ಬೇರೆಯವರ ಹೆಸರು ಬಳಸಿಕೊಳ್ಳದೆ ಯಾರು ತಾನೇ ಗೆದ್ದಿದ್ದಾರೆ..? ಕುಸುಮಾ ಡಿ.ಕೆ.ರವಿಯವರ ಜೊತೆ ಸಪ್ತಪದಿ ತುಳಿದು ಅಧಿಕೃತವಾಗಿ ಮದುವೆಯಾಗಿದ್ದಾರೆ. ಅವರ ಗಂಡನ ಹೆಸರು ಬಳಕೆ ಮಾಡಿಕೊಳ್ಳಬಾರದು ಎಂದು ಹೇಳಲು ಇವರು ಯಾರು..? ಶೋಭಾ ಕರಂದ್ಲಾಜೆಗೆ ಗಂಡನನ್ನು ಕಳೆದುಕೊಂಡ ಹೆಣ್ಣಿನ ನೋವಿನ ಅರಿವಿಲ್ಲ. ಅವರಿಗೆ ತಮ್ಮ ತಂದೆಯ ನೋವಿನ ಬಗ್ಗೆ ಅರಿವಾಗಿರಬಹುದು, ಆದರೆ ಗಂಡನನ್ನ ಕಳೆದುಕೊಂಡ ಹೆಣ್ಣಿನ ಏಕಾಂಗಿತನ, ಅವರ ನೋವು ಅರ್ಥವಾಗಲು ಸಾಧ್ಯವಿಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.