ಕರ್ನಾಟಕ

karnataka

ETV Bharat / state

ಫ್ಲೆಕ್ಸ್ ಪಿಡುಗು ನಿರ್ಮೂಲನೆಗೆ ಎಲ್ಲ ಪಕ್ಷಗಳ ಸಹಕಾರ ಅಗತ್ಯ: ಸುರೇಶ್ ಕುಮಾರ್ - ಬೆಂಗಳೂರು ನಗರದಲ್ಲಿ ಅನಧಿಕೃತ ಫ್ಲೆಕ್ಸ್ ನಿರ್ಬಂಧ

ಬೆಂಗಳೂರಿನಲ್ಲಿ ಅನಧಿಕೃತ ಫ್ಲೆಕ್ಸ್ ಹಾವಳಿಗೆ ನಿರ್ಬಂಧ ಹೇರಲು ಮುಂದಾಗಿರುವ ಸರ್ಕಾರದ ನಿರ್ಧಾರವನ್ನು ಮಾಜಿ ಸಚಿವ ಸುರೇಶ್ ಕುಮಾರ್ ಸ್ವಾಗತಿಸಿದ್ದಾರೆ.

former-minister-suresh-kumar-supports-flex-ban-in-bengaluru
ಫ್ಲೆಕ್ಸ್ ಪಿಡುಗು ನಿರ್ಮೂಲನೆಗೆ ಎಲ್ಲ ಪಕ್ಷಗಳ ಸಹಕಾರ ಅಗತ್ಯ: ಸುರೇಶ್ ಕುಮಾರ್

By

Published : Aug 9, 2023, 10:47 AM IST

ಬೆಂಗಳೂರು:ಫ್ಲೆಕ್ಸ್ ಒಂದು ಪಿಡುಗಾಗಿದ್ದು, ಇದರ ನಿರ್ಮೂಲನೆ ಆಗಲೇಬೇಕು. ಬೆಂಗಳೂರು ನಗರದಲ್ಲಿ ಅನಧಿಕೃತ ಫ್ಲೆಕ್ಸ್ ನಿರ್ಬಂಧಕ್ಕೆ ಕ್ರಮ ಕೈಗೊಳ್ಳಲು ಹೊರಟಿರುವುದು ಅತ್ಯಂತ ಸ್ವಾಗತಾರ್ಹ ಕಾರ್ಯಕ್ರಮ. ಆಡಳಿತ ನಡೆಸುವ ಪಕ್ಷ ಹಾಗೂ ಇತರ ರಾಜಕೀಯ ಪಕ್ಷಗಳು ಫ್ಲೆಕ್ಸ್ ನಿರ್ಬಂಧದ ಕುರಿತು ಪರಸ್ಪರ ಸಹಕಾರ ನೀಡಿದರೆ ಮಾತ್ರ ಈ ತೀರ್ಮಾನ ಯಶಸ್ವಿಯಾಗುತ್ತದೆ. ಅದು ಆಗಲಿ ಎಂದು ಆಶಿಸುತ್ತೇನೆ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿದ್ದಾರೆ.

ಹಿಂದೆ ಎಷ್ಟೋ ಬಾರಿ ಈ ರೀತಿಯ ಕ್ರಮದ ಕುರಿತು ಘೋಷಣೆ ಆಗಿದೆ, ಆದರೆ ಸಫಲವಾಗಿಲ್ಲ. ಇದರ ಅನುಷ್ಟಾನಕ್ಕೆ ರಾಜಕೀಯ ಪಕ್ಷಗಳ ಸಹಕಾರ ಇದಕ್ಕೆ ಅತ್ಯಂತ ಅಗತ್ಯ. ವಿಶೇಷವಾಗಿ ರಾಜಕೀಯ ಪಕ್ಷದ ನಾಯಕರುಗಳ ಹುಟ್ಟಿದ ಹಬ್ಬ ಆಚರಣೆಯು ಈ ಫ್ಲೆಕ್ಸ್ ಸಮಸ್ಯೆಗೆ ಮೂಲ ಎಂದು ಸಾಮಾಜಿಕ ಜಾಲತಾಣದಲ್ಲಿ ಸುರೇಶ್ ಕುಮಾರ್ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ದೊಡ್ಡವರ ರಾಶಿ ರಾಶಿ ಫ್ಲೆಕ್ಸ್​ಗಳ ಮೇಲ್ಪಂಕ್ತಿ ನೋಡಿ ಪ್ರಭಾವಿತರಾಗಿ ಹಿಂಬಾಲಕರು ಸಹ ತಮ್ಮ ಇರುವಿಕೆಯನ್ನು ತೋರಿಸಲು ಹೊರಡುತ್ತಾರೆ. ಅನಾಮಧೇಯರು ಸಹ ನಾಮಧೇಯರಾಗಲು ಫ್ಲೆಕ್ಸ್ ಅತ್ಯಂತ ಸುಲಭ ಮಾರ್ಗ. ಪ್ರಜ್ಞಾವಂತ ನಾಗರಿಕರು ಫ್ಲೆಕ್ಸ್​ಗಳನ್ನು ನೋಡಿದಾಗಲೆಲ್ಲಾ ಅದೆಷ್ಟು ಶಪಿಸಿಕೊಂಡು, ಅಪಹಾಸ್ಯ ಮಾಡಿಕೊಂಡು, ಉಗಿದುಕೊಂಡು ಓಡಾಡುತ್ತಾರೆ ಎಂಬುದು ಫ್ಲೆಕ್ಸ್​ನಲ್ಲಿ ಕಾಣಿಸಿಕೊಳ್ಳುವ ಮಹನೀಯರಿಗೆ ಗೊತ್ತಾಗುವುದಿಲ್ಲ. ಈ ಕುರಿತು ಅಷ್ಟು ಹೇವರಿಕೆ ಇದೆ ಸಾಮಾನ್ಯ ಜನಕ್ಕೆ ಎಂದು ಫ್ಲೆಕ್ಸ್ ಸಂಸ್ಕೃತಿ ಕುರಿತು ಅಸಹನೆ ವ್ಯಕ್ತಪಡಿಸಿದ್ದಾರೆ.

ರಾಜಕೀಯ ಪಕ್ಷಗಳ ನಡುವೆ ಈ ಕುರಿತು ಒಂದು ಸಾಮಾನ್ಯ ಕನಿಷ್ಠ ಒಪ್ಪಂದ (Common Minimum Agreement) ಬಂದಾಗಲೇ ಬೆಂಗಳೂರು ಫ್ಲೆಕ್ಸ್ ಹಾವಳಿ, ಪಿಡುಗಿನಿಂದ ತಪ್ಪಿಸಿಕೊಳ್ಳುವುದು. ವಿಧಾನಸೌಧದ ಸುತ್ತಮುತ್ತ ಸುಮಾರು ಒಂದು ಕಿಲೋಮೀಟರ್ ಫ್ಲೆಕ್ಸ್ ಕಾಣಬಾರದು ಎಂದು ಸರ್ಕಾರವೇ ವಿಧಾನಸೌಧದಲ್ಲಿ ಆಶ್ವಾಸನೆ ಕೊಟ್ಟಿದೆ. ಆದರೆ, ಸರ್ಕಾರದ ಪ್ರಮುಖರೇ ಕಾಣಿಸಿಕೊಳ್ಳುವ ಫ್ಲೆಕ್ಸ್​ಗಳನ್ನು ತೆಗೆಯುವ ಧೈರ್ಯ ಸರ್ಕಾರದ ಯಾವ ಇಲಾಖೆಗೆ ಇದ್ದೀತು? ಎಂದು ಸುರೇಶ ಕುಮಾರ್ ಪ್ರಶ್ನಿಸಿದ್ದಾರೆ.

ಇದರ ಜೊತೆ ವಿವಿಧ ಸಂಘಟನೆಗಳ ಫ್ಲೆಕ್ಸ್ ಭರಾಟೆ ಬೇರೆ. ಒಂದು ಪಕ್ಷದ ಫ್ಲೆಕ್ಸ್ ಬಂದ ತಕ್ಷಣ ಇನ್ನೊಂದು ಪಕ್ಷದವರಿಗೆ ನಾವೇನು ಕಡಿಮೆ ಎಂದೆನಿಸಿ ಅವರೂ ಪ್ಲೆಕ್ಸ್​​ ಹಾಕಲು ಆರಂಭಿಸುತ್ತಾರೆ. ಅದನ್ನು ತಡೆಯಲು ಹೋಗುವ ಪ್ರಮುಖರಿಗೆ ಅವರ ಹಿಂಬಾಲಕರೇ ಅಸಮಾಧಾನ, ಪ್ರತಿಭಟನೆ ತೋರುತ್ತಾರೆ. ಬೆಂಗಳೂರಿನ ರಸ್ತೆಗಳು ಎಂದರೆ ಯಾರಾದರೂ ಎಲ್ಲಿಯಾದರೂ ಎಂತಹದಾದರೂ ಜಾಹೀರಾತು ಕೊಡಬಹುದು ಎಂಬಷ್ಟು ಸ್ವೇಚ್ಛಾಚಾರ ಈ ಫ್ಲೆಕ್ಸ್​ಗಳ ಮೂಲಕ ಬಂದು ಬಿಟ್ಟಿದೆ. ಅಷ್ಟು ಬಿಟ್ಟಿ ಪ್ರಚಾರದ ಸಮೂಹ ಸನ್ನಿ ಎಂದು ಸುರೇಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜನತೆಗೆ ತಿಳಿಸಲೇಬೇಕಾದ ಮಾಹಿತಿ ನೀಡಲು ಅಗತ್ಯ ಅವಕಾಶದ ಬಗ್ಗೆಯೂ ಈ ಸಮಯದಲ್ಲಿ ಯೋಚಿಸಬೇಕಾಗುತ್ತದೆ. ಆಡಳಿತ ನಡೆಸುವ ಪಕ್ಷ ಹಾಗೂ ಇತರೆ ರಾಜಕೀಯ ಪಕ್ಷಗಳು ಫ್ಲೆಕ್ಸ್ ನಿರ್ಬಂಧದ ಕುರಿತು ಪರಸ್ಪರ ಸಹಕಾರ ನೀಡಿದರೆ ಮಾತ್ರ ಅದು ಯಶಸ್ವಿಯಾಗುತ್ತದೆ ಎಂದು ಸರ್ಕಾರದ ನಿರ್ಧಾರಕ್ಕೆ ಸುರೇಶ್ ಕುಮಾರ್ ಸಹಮತ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಇನ್ಮುಂದೆ ಬೆಂಗಳೂರಲ್ಲಿ ಫ್ಲೆಕ್ಸ್, ಹೋರ್ಡಿಂಗ್ಸ್ ಹಾಕಿದ್ರೆ 50 ಸಾವಿರ ರೂಪಾಯಿ ದಂಡ: ಡಿಸಿಎಂ ಡಿ ಕೆ ಶಿವಕುಮಾರ್​ ಎಚ್ಚರಿಕೆ

ABOUT THE AUTHOR

...view details