ಬೆಂಗಳೂರು:ಯಾವುದೇ ಆಧಾರ ಇಲ್ಲದೆ ಓರ್ವರನ್ನು ಗೂಂಡಾ ಕಾಯ್ದೆ ಅಡಿ ಬಂಧಿಸುವುದು ಎಷ್ಟು ತಪ್ಪೊ, ಅದಕ್ಕಿಂತ ದೊಡ್ಡ ತಪ್ಪು ಉಪವಾಸ ಸತ್ಯಾಗ್ರಹವನ್ನು ಆತ್ಮಹತ್ಯೆ ಯತ್ನ ಎಂದು ಪ್ರಕರಣ ದಾಖಲು ಮಾಡುವುದು ಎಂದು ಹಿಂದೂಪರ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿರುವುದಕ್ಕೆ ಮಾಜಿ ಸಚಿವ ಸುರೇಶ್ ಕುಮಾರ್ ಟೀಕಿಸಿದ್ದಾರೆ.
ಪುನೀತ್ ಕೆರೆಹಳ್ಳಿ ವಿರುದ್ಧದ ಎಫ್ಐಆರ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಸುರೇಶ್ ಕುಮಾರ್
ಈ ಎಫ್ಐಆರ್ ಓದಿದರೆ ಇದೊಂದು ಪೊಲೀಸರ ಅತ್ಯಂತ ಬುದ್ಧಿಹೀನ ಕಾಯ್ದೆ ಅನಿಸುತ್ತದೆ. ಒಂದು ಉಪವಾಸ ಸತ್ಯಾಗ್ರಹವನ್ನು ಆತ್ಮಹತ್ಯೆ ಯತ್ನ ಎಂದು ಪರಿವರ್ತಿಸಲು ಹೊರಟಿರುವುದು ಕರ್ನಾಟಕ ಪೊಲೀಸರ ಸಾಹಸವೆಂದು ಹೇಳಬೇಕಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಮಹಾತ್ಮ ಗಾಂಧಿಯವರು ಬ್ರಿಟಿಷರ ವಿರುದ್ಧ ಹೋರಾಡುವಾಗ ಹಾಕಿಕೊಟ್ಟ ಹೋರಾಟಗಳ ಅನೇಕ ಹಾದಿಗಳಲ್ಲಿ ಉಪವಾಸ ಸತ್ಯಾಗ್ರಹವೂ ಕೂಡ ಒಂದು. ಆ ಉಪವಾಸ ಸತ್ಯಾಗ್ರಹ ಅಮರಣಾಂತ ಉಪವಾಸ ಸತ್ಯಾಗ್ರಹವಾಗಿಯೂ ಅಥವಾ ಅನಿರ್ದಿಷ್ಟ ಅವಧಿಯ ಉಪವಾಸ ಸತ್ಯಾಗ್ರಹವಾಗಿಯೂ ನಡೆಯಬಹುದು. 1986-87ರಲ್ಲಿ ಅಂದಿನ ಬೆಂಗಳೂರು ನಗರಸಭೆಯ ಸದಸ್ಯರಾಗಿದ್ದ ರಾಮಚಂದ್ರಗೌಡ, ಎಂಸಿ ಅಶ್ವತನಾರಾಯಣ್, ಶ್ರೀನಿವಾಸ್ ಮೂರ್ತಿಯವರು ಹಾಗೂ ನಾನು ನಗರಸಭೆಯ ಆಸ್ತಿ ತೆರಿಗೆಯ ಅವೈಜ್ಞಾನಿಕ ಪರಿಷ್ಕರಣ ವಿರುದ್ಧ ಹೋರಾಟ ಕೈಗೊಂಡಿದ್ದೆವು, ಪ್ರತಿಯೊಬ್ಬ ವ್ಯಕ್ತಿಯು ತನ್ನ ಆಸ್ತಿಯ ತೆರಿಗೆಯನ್ನು ತಾನೇ ನಿರ್ಧರಿಸುವಂತೆ ಸ್ವಯಂ ಮೌಲ್ಯಮಾಪನ ಯೋಜನೆ ಪದ್ಧತಿಯನ್ನು ಜಾರಿಗೆ ತರಬೇಕೆಂದು ಮೆಯೋಹಾಲ್ ಆವರಣದಲ್ಲಿ ಅನಿರ್ದಿಷ್ಟ ಅವಧಿಗಳ ಕಾಲ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದೆವು. ನಮ್ಮ ಉಪವಾಸ ಸತ್ಯಾಗ್ರಹದ 7ನೇ ದಿನ ನಮ್ಮ ಆರೋಗ್ಯ ಸ್ಥಿತಿ ಬಿಗಡಾಯಿಸಿದಾಗ ನಮ್ಮನ್ನು ಆಸ್ಪತ್ರೆಗೆ ಸೇರಿಸಿದರು. ಆದರೆ ನಮ್ಮ ವಿರುದ್ಧ ಆತ್ಮಹತ್ಯೆಗೆ ಯತ್ನ ಎಂಬ ಆರೋಪ ಪ್ರಕರಣ ದಾಖಲಾಗಿರಲಿಲ್ಲ ಎಂದು ಇಂದಿನ ಪೊಲೀಸರ ನಡೆಯನ್ನು ಖಂಡಿಸಿದ್ದಾರೆ.