ಕರ್ನಾಟಕ

karnataka

ETV Bharat / state

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣ ವಾಪಸ್ ಪಡೆಯಬಾರದು: ಸುನೀಲ್ ಕುಮಾರ್, ಅಶ್ವತ್ಥ ನಾರಾಯಣ ಆಗ್ರಹ - etv bharat kannda

ಕಾಂಗ್ರೆಸ್​ನ ಶಾಸಕರು ಮತ್ತು ಯಾರದೇ ಒತ್ತಡಕ್ಕೂ ಮಣಿಯದೆ ಗಲಭೆ ಪ್ರಕರಣದ ತನಿಖೆ ನಡೆಸಬೇಕು ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ.

former-minister-sunil-kumar-reaction-on-dj-halli-and-kg-halli-riot-case
ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಕೇಸ್ ವಾಪಸ್ ಪಡೆಯಬಾರದು: ಸುನೀಲ್ ಕುಮಾರ್ ಆಗ್ರಹ

By

Published : Jul 26, 2023, 4:52 PM IST

Updated : Jul 26, 2023, 5:05 PM IST

ಬೆಂಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಕೇಸ್ ವಾಪಸ್ ಪಡೆಯುವ ನಿರ್ಧಾರ ಖಂಡನೀಯವಾಗಿದ್ದು, ಯಾವುದೇ ಕಾರಣಕ್ಕೂ ಕೇಸ್ ವಾಪಸ್ ಪಡೆಯಬಾರದು, ಯಾವ ಒತ್ತಡಕ್ಕೂ ಗೃಹ ಸಚಿವ ಡಾ.ಜಿ ಪರಮೇಶ್ವರ್ ಮಣಿಯದೇ ತನಿಖೆ ಮುಂದುವರೆಸಬೇಕು ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ. ಸರ್ಕಾರದ ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.

ಕಾಂಗ್ರೆಸ್ ನ ಶಾಸಕರೊಬ್ಬರು ಡಿಜೆ ಹಳ್ಳಿ, ಕೆಜಿಹಳ್ಳಿ, ಶಿವಮೊಗ್ಗ, ಹುಬ್ಬಳ್ಳಿ ಗಲಭೆ ಕೇಸ್​ಗಳಲ್ಲಿ ಅಮಾಯಕರ ವಿರುದ್ಧದ ಮೊಕದ್ದಮೆ ವಾಪಸ್ ಪಡೆಯಬೇಕು ಎನ್ನುವ ಬೇಡಿಕೆ ಇಟ್ಟಾಗ ಗೃಹ ಸಚಿವ ಡಾ.ಜಿ ಪರಮೇಶ್ವರ್ ಪೂರಕವಾಗಿ ಸ್ಪಂದಿಸಿದ್ದನ್ನು ಉಗ್ರವಾಗಿ ಖಂಡಿಸುತ್ತೇನೆ. ಭಯಾನಕವಾದ ಗಲಭೆಯನ್ನು ಉದ್ದೇಶಪೂರ್ವಕವಾಗಿಯೇ ಕೆಲ ಯುವಕರು ಮಾಡಿದ್ದನ್ನು ನಾವು ನೋಡಿದ್ದೇವೆ. ಪೊಲೀಸ್ ಠಾಣೆ ಮೇಲೂ ಅವರು ದಾಳಿ ಮಾಡಿದ್ದಾರೆ. ಪೊಲೀಸರ ಜೊತೆ ನಾಗರಿಕರನ್ನೂ ಗುರಿಯಾಗಿಸಿಕೊಂಡು ಹಿಂಸೆ ನಡೆಸಿದ್ದರು. ಇಂತಹವರನ್ನು ಅಮಾಯಕರು ಅನ್ನುವುದೇ ಅತ್ಯಂತ ಖಂಡನೀಯ, ಯಾವುದೇ ಕಾರಣಕ್ಕೂ ಇಂತಹ ಪ್ರಕರಣದಲ್ಲಿ ಭಾಗಿಯಾದವರ ಬಗ್ಗೆ ಗೃಹ ಸಚಿವರು ಕರುಣೆ ತೋರಬಾರದು ಎಂದು ಆಗ್ರಹಿಸಿದರು.

ಈ ಹಿಂದೆ ಸಿದ್ದರಾಮಯ್ಯ, ಪಿಎಫ್ಐ ಮೇಲಿನ ಕೇಸ್ ವಾಪಸ್​ ಪಡೆದಾಗ ರಾಜ್ಯದಲ್ಲಿ ಮೂರೂವರೆ ವರ್ಷಗಳ ಕಾಲ ಎಷ್ಟೆಲ್ಲ ಗಲಭೆಗಳು ಆದವು ಎನ್ನುವುದು ಎಲ್ಲರಿಗೂ ಗೊತ್ತಿದೆ. ಬೇರೆ ಬೇರೆ ಪ್ರಕರಣಗಳ ಕುರಿತು ಎನ್ಐಎ ತನಿಖೆ ಮಾಡುತ್ತಿರುವಾಗ, ಪಿಎಫ್ಐಗೆ ಪರೋಕ್ಷವಾಗಿ ಬೆಂಬಲ ಕೊಡುತ್ತಿರುವ ಅಂಶ ಬೆಳಕಿಗೆ ಬಂದಿದೆ. ಆದ್ದರಿಂದ ಇಂತವರ ಈ ಕೇಸ್​ಗಳನ್ನು ವಾಪಸ್​ ತೆಗೆದುಕೊಳ್ಳಬಾರದು ಕಾಂಗ್ರೆಸ್​ನ ಶಾಸಕರ ಯಾವುದೇ ಒತ್ತಡಕ್ಕೆ ಮಣಿಯಾಬಾರದು. ಪ್ರಕರಣದ ತನಿಖೆ ಸಡಿಲಿಕೆ ಮಾಡಬಾರದು ಎಂದು ಅವರು ಇದೇ ವೇಳೆ ಆಗ್ರಹಿಸಿದ್ದಾರೆ.

ಉಡುಪಿ ವೈದ್ಯಕೀಯ ಕಾಲೇಜಿನ ವಿಡಿಯೋ ಪ್ರಕರಣ ನಾಗರಿಕ ಸಮಾಜದಲ್ಲಿ ತಲೆ ತಗ್ಗಿಸುವಂತದ್ದು, ಇದನ್ನು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹಗುರವಾಗಿ ತೆಗೆದುಕೊಳ್ಳಬಾರದು ಸಮಗ್ರವಾದ ತನಿಖೆ ಮಾಡಬೇಕು ಎಂದು ಮಾಜಿ ಸಚಿವ ಸುನೀಲ್ ಕುಮಾರ್ ಆಗ್ರಹಿಸಿದರು.

ಹಿಜಾಬ್ ಕುರಿತು ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಸುಪ್ರೀಂಕೋರ್ಟ್ ವರೆಗೂ ಹೋಗುತ್ತಾರೆ ಅಂದರೆ ಏನು ಹೇಳಬೇಕು. ತಕ್ಷಣ ತಪ್ಪಿತಸ್ಥರ ಮೇಲೆ ಕೇಸ್ ಹಾಕಬೇಕು, ಅಲ್ಲದೇ ಇದರ ಹಿಂದಿನ ದೊಡ್ಡ ಷಡ್ಯಂತ್ರವನ್ನು ಹೊರಗೆ ತರಬೇಕು. ಜೊತೆಗೆ ಈ ಪ್ರಕರಣ ಬಗ್ಗೆ ಸಮಗ್ರವಾದ ತನಿಖೆ ಆಗಬೇಕು. ಇನ್ನು ಈ ಪ್ರಕರಣವನ್ನು ಬೆಳಕಿಗೆ ತಂದ ಹಾಗೂ ಇದರ ಬಗ್ಗೆ ಧ್ವನಿ ಎತ್ತಿದವರ ಮೇಲೆ ಪೊಲೀಸರು ಕೇಸ್ ಹಾಕುವುದು ಸರಿಯಲ್ಲ, ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಈ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕು ಎಂದು ಸುನೀಲ್​ ಕುಮಾರ್​​​​ ಆಗ್ರಹಿಸಿದರು.

ಕಾಂಗ್ರೆಸ್​​ನಿಂದ ತುಷ್ಟೀಕರಣ ರಾಜಕಾರಣ - ಅಶ್ವತ್ಥ ನಾರಾಯಣ: ಕಾಂಗ್ರೆಸ್ ಸರ್ಕಾರದಿಂದ ತುಷ್ಟೀಕರಣ ರಾಜಕಾರಣ ನಡೆಯುತ್ತಿದೆ ಎಂದು ಮಾಜಿ ಸಚಿವ ಅಶ್ವತ್ಥ ನಾರಾಯಣ ಆರೋಪಿಸಿದ್ದಾರೆ. ಇಷ್ಟು ಸೂಕ್ಷ್ಮತೆ ಪ್ರಕರಣದಲ್ಲಿ ಗೃಹ ಸಚಿವರಾಗಿ ಅವರ ಇಲಾಖೆಯಲ್ಲಿ ಏನಾಗಿದೆ ಎನ್ನುವ ಮಾಹಿತಿ ಪಡೆಯದೇ ಕೇವಲ ಪತ್ರದ ಆಧಾರದಲ್ಲಿ ಕ್ರಮ ವಹಿಸಿ ಎಂದು ಎಂಡೋಸ್ ಮಾಡಿ ಪತ್ರ ಬರೆಯುತ್ತಾರೆ ಎಂದರೆ ಹೇಗೆ?. ಇವರದ್ದೇ ಇಲಾಖೆಯಲ್ಲವೇ? ಇವರು ಮಾಹಿತಿ ಪಡೆಯಬಹುದಿತ್ತಲ್ಲ. ಯಾವ ಯಾವ ವ್ಯಕ್ತಿ ಭಾಗಿಯಾಗಿದ್ದರೋ? ತನಿಖೆಯಾಗಿ ಜೈಲಲ್ಲಿ ಇರಬೇಕಾದವರ ಬಗ್ಗೆ ಸಹಾನುಭೂತಿ ತೋರುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಇದೇ ವೇಳೆ, ಗೃಹ ಸಚಿವರ ಹೇಳಿಕೆ ಬಗ್ಗೆ ಸಂಸದ ತೇಜಸ್ವಿ ಸೂರ್ಯ, ಬಿಜೆಪಿ ರಾಜ್ಯ ಎಸ್​​​ಸಿ ಮೋರ್ಚಾ ಅಧ್ಯಕ್ಷ ಚಲವಾದಿ ನಾರಾಯಣ ಸ್ವಾಮಿ ಸೇರಿದಂತೆ ಇನ್ನೂ ಅನೇಕ ಮುಖಂಡರು ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ. ಯಾವುದೇ ಕಾರಣಕ್ಕೂ ಪ್ರಕರಣ ವಾಪಸ್​ ಪಡೆಯದಂತೆ ಆಗ್ರಹಿಸಿದ್ದಾರೆ.

ಇದನ್ನೂ ಓದಿ:ಶಾಸಕರು ಪತ್ರ ಬರೆದಿರುವುದು ಒಳ್ಳೆಯ ಬೆಳವಣಿಗೆ: ಸಚಿವ ಮಧು ಬಂಗಾರಪ್ಪ

Last Updated : Jul 26, 2023, 5:05 PM IST

ABOUT THE AUTHOR

...view details