ಬೆಂಗಳೂರು: ''ರಾಜ್ಯದಲ್ಲಿ ಮುಂಗಾರು ವೈಫಲ್ಯವಾಗಿ ಹಲವಾರು ಗ್ರಾಮದಲ್ಲಿ ಕುಡಿಯುವ ನಿರಿನ ಹಾಹಾಕಾರ ಉಂಟಾಗಿದೆ, ಅಂತರ್ಜಲ ಕುಸಿದಿದೆ. ರೈತರ ಪಾಲಿಗೆ ಮುಂಗಾರು ವೈಫಲ್ಯ ಬಹಳ ದೊಡ್ಡ ಹೊಡೆತ ಕೊಟ್ಟಿದೆ. ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳುವ ಬದಲು, ದ್ವೇಷದ ತೀರ್ಮಾನಗಳನ್ನು ತೆಗೆದುಕೊಂಡು ಸಂಕಷ್ಟದಲ್ಲಿರುವ ಕರ್ನಾಟಕದ ಜನರಿಗೆ ಈ ಸರ್ಕಾರ ಶಾಪವಾಗಿದೆ'' ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ಈ ಕುರಿತು ಟ್ಚೀಟ್ ಮಾಡಿರುವ ಅವರು, ''ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ದ್ವೇಷದ ಹಾಗೂ ತುಷ್ಟೀಕರಣ ರಾಜಕಾರಣ ಮಾಡುತ್ತಿದೆ. ಹಿಂದಿನ ಸರ್ಕಾರದ ತೀರ್ಮಾನಗಳನ್ನು ರದ್ದು ಮಾಡುವುದನ್ನೇ ತನ್ನ ಸಾಧನೆ ಎನ್ನುವಂತೆ ನಡೆದುಕೊಳ್ಳುತ್ತಿದೆ. ಸಮಾಜಕ್ಕೆ ಮಾರಕವಾಗಿದ್ದ ಮತಾಂತರ ನಿಷೇಧ ಕಾಯ್ದೆಯನ್ನು ರದ್ದುಮಾಡುವ ತೀರ್ಮಾನ ತೆಗೆದುಕೊಂಡು ಯಾರ ಓಲೈಕೆ ಮಾಡುತ್ತಿದೆ. ಹೈಕಮಾಂಡ್ ಹಂಗಿನಲ್ಲಿ ಅಧಿಕಾರ ನಡೆಸುತ್ತಿರುವ ಸಿದ್ದರಾಮಯ್ಯ ರಾಜ್ಯದ ಜನರ ಹಿತಾಸಕ್ತಿಗಿಂತ ಹೈಕಮಾಂಡ್ ಓಲೈಕೆಗೆ ಆದ್ಯತೆ ನೀಡುತ್ತಿರುವಂತಿದೆ'' ಎಂದು ಆರೋಪಿಸಿದ್ದಾರೆ.
''ಪಠ್ಯ ಪುಸ್ತಕವನ್ನೂ ಪರಿಷ್ಕರಣೆಯ ಹೆಸರಲ್ಲಿ ರಾಷ್ಟ್ರ ಭಕ್ತ ಸಂಘಟನೆ ಸ್ಥಾಪಿಸಿ, ಎಲ್ಲರಲ್ಲೂ ದೇಶಭಕ್ತಿ ಬೆಳೆಯಲು ಕಾರಣವಾಗುವಂತಹ ಆರ್ಎಸ್ಎಸ್ ಸಂಘಟನೆ ಸ್ಥಾಪಿಸಿರುವ ಡಾ. ಕೇಶವ ಬಲರಾಮ್ ಹೆಡ್ಗೇವಾರ್ ಹಾಗೂ ಸಾವರ್ಕರ್ ಅವರ ಕುರಿತ ಪಠ್ಯವನ್ನು ತೆಗೆದು ಹಾಕಲು ತೀರ್ಮಾನ ತೆಗೆದುಕೊಂಡಿರುವುದು ದೇಶದ್ರೋಹಕ್ಕೆ ಸಮಾನ'' ಎಂದು ಹೇಳಿದ್ದಾರೆ.
ವಿ ಸುನಿಲ್ ಕುಮಾರ್ ಕಿಡಿ: ''ಸಾರ್ವರ್ಕರ್ ಹಾಗೂ ಹೆಡ್ಗೇವಾರ್ ಅವರ ಪಾಠಗಳನ್ನು ಪಠ್ಯ ಪುಸ್ತಕದಿಂದ ಕೈ ಬಿಟ್ಟಿರುವ ಕಾಂಗ್ರೆಸ್ ಸರ್ಕಾರ ಲೋಕಸಭೆ ಸ್ಥಾನದಿಂದ ಅನರ್ಹಗೊಂಡಿರುವ ವಿಫಲ ನಾಯಕನ ಹೆಸರಿನಲ್ಲಿ ಮಕ್ಕಳಿಗೆ ಪಠ್ಯ ರೂಪಿಸುತ್ತದೆಯೇ? ಪ್ರಣಾಳಿಕೆಯ ಭರವಸೆ ಜಾರಿಗೆ ದಿನಾಂಕ ಗ್ಯಾರಂಟಿಯಾಗದ ಕಾರಣಕ್ಕೆ ಮತಾಂತರ ನಿಷೇಧ ಕಾಯ್ದೆ ರದ್ದುಪಡಿಸಿ ಸಾರ್ವಜನಿಕರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದೀರಾ?'' ಎಂದು ಮಾಜಿ ಸಚಿವ ವಿ ಸುನಿಲ್ ಕುಮಾರ್ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಸಂಪುಟದಲ್ಲಿ ತೆಗೆದುಕೊಂಡ ಈ ಎರಡು ನಿರ್ಣಯದ ವಿರುದ್ಧ ಪತ್ರಿಕಾ ಹೇಳಿಕೆ ಮೂಲಕ ಕಿಡಿಕಾರಿರುವ ಅವರು, ''ದೇಶಭಕ್ತ ಸ್ವಾತಂತ್ರ್ಯ ಹೋರಾಟಗಾರರ ಪಠ್ಯ ತೆಗೆಯಿರಿ ಎಂದು ನಕಲಿ ಗಾಂಧಿ ಪಾರಿವಾರ ನೀಡಿದ ಆದೇಶವನ್ನು ಪಾಲನೆ ಮಾಡುತ್ತಿದ್ದೀರಾ?'' ಎಂದು ಪ್ರಶ್ನಿಸಿದ್ದಾರೆ.