ಬೆಂಗಳೂರು : ಜೆಡಿಎಸ್ -ಬಿಜೆಪಿ ಮೈತ್ರಿ ವಿಚಾರ ನನಗೂ ವೈಯಕ್ತಿಕವಾಗಿ ಅಸಮಾಧಾನ ಇದೆ ಎಂದು ಮಾಜಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೈಯಕ್ತಿಕವಾಗಿ 20 ವರ್ಷದಿಂದ ಸೆಣಸಾಟ ಮಾಡಿಕೊಂಡು ಬಂದಿದ್ದೇವೆ. ಕಾಂಗ್ರೆಸ್-ಜೆಡಿಎಸ್ ಜೊತೆ ಮೈತ್ರಿ ನೋಡಿದ್ದೇನೆ. ಕಾಂಗ್ರೆಸ್‌ಗೆ ಜೆಡಿಎಸ್ ಮೊದಲಿನಿಂದಲೂ ವಿರೋಧ ಇದೆ ಎಂದರು.
ಯಾವತ್ತೂ ಕೂಡ ನಮ್ಮ ಹಾಗೂ ಅವರ ಕಾರ್ಯಕರ್ತರಿಗೆ ಹೊಂದಾಣಿಕೆ ಇಲ್ಲ. ಮಾನಸಿಕ ಕಿರುಕುಳ ಹತ್ತಿರದಿಂದ ನೋಡಿದ್ದೇನೆ. ಅಧಿಕೃತವಾಗಿ ಮೈತ್ರಿಯಾದ ಬಳಿಕ ನಿರ್ಧಾರ ಮಾಡುತ್ತೇನೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಇತ್ತು. ಅವರು ಇವರಿಗೆ ಮತ ಹಾಕಲಿಲ್ಲ. ಇವರು ಅವರಿಗೆ ಮತ ಹಾಕಲಿಲ್ಲ. ಯಾರೂ ಕೂಡ ಈ ಬಗ್ಗೆ ಮಾತನಾಡುತ್ತಿಲ್ಲ. ಆದರೆ, ಎಲ್ಲರಿಗೂ ಅಸಮಾಧಾನ ಅಂತೂ ಇದೆ. ನಮ್ಮ ಪಕ್ಷದಲ್ಲಿ ಯಾರನ್ನೂ ಕರೆದು ಚರ್ಚೆ ಮಾಡಿಲ್ಲ ಎಂದು ಸೋಮಶೇಖರ್ ತಿಳಿಸಿದರು.
ಬೆಂಬಲಿಗರು ಬಿಜೆಪಿ ಬಿಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ಕ್ಷೇತ್ರ ಅಷ್ಟೇ ಅಲ್ಲ. ಆರ್. ಅಶೋಕ್, ಮುನಿರತ್ನ ಅವರು ದಾಸರಹಳ್ಳಿ ಕ್ಷೇತ್ರಗಳಲ್ಲಿ ಹೋಗಿದ್ದಾರೆ. 100% ಬಿಜೆಪಿಯಲ್ಲಿ ಇದ್ದೀನಿ, ಹೋಗಿಲ್ಲ. ಆದರೆ, ಮೈತ್ರಿ ಬಳಿಕ ಯೋಚನೆ ಮಾಡಬೇಕಿದೆ. 6 ಬಾರಿ ಜೆಡಿಎಸ್ ಜೊತೆ ಹೊಡೆದಾಡಿಕೊಂಡು ಬಂದಿದ್ದೇವೆ. ಜೆಡಿಎಸ್ ಜೊತೆ ಮೈತ್ರಿ ವಿಚಾರ ಯಾರಿಗೂ ಆಗಲ್ಲ ಅಂತ ಕಾಂಗ್ರೆಸ್ ಸೇರುತ್ತಿದ್ದಾರೆ ಎಂದು ಹೇಳಿದರು.
ನೈಸ್ ಹಗರಣ ವಿಚಾರಕ್ಕೆ ಪ್ರತಿಕ್ರಿಯಿಸಿದ ಸೋಮಶೇಖರ್ ಅವರು, ಹಿರಿಯ ನಾಯಕ ಟಿ.ಬಿ ಜಯಚಂದ್ರ ನೇತೃತ್ವದಲ್ಲಿ ಸಮಿತಿ ಮಾಡಲಾಗಿತ್ತು.
ನಾನು ಕ್ಯಾಬಿನೆಟ್ ಸಬ್ ಕಮಿಟಿಯಲ್ಲಿದ್ದೆ. ಸದನ ಸಮಿತಿ ಇದ್ದಾಗ ಟಿ.ಬಿ ಜಯಚಂದ್ರ ಅಧ್ಯಕ್ಷರಾಗಿದ್ದರು. ನೈಸ್ ಸಮಿತಿಯ ಸಂಪೂರ್ಣ ಅಧ್ಯಯನ ಮಾಡಿ ವರದಿ ಕೊಡಲಾಗಿತ್ತು. ನಾನ್ ಅಗ್ರಿಮೆಂಟ್ ಆಗಿರುವುದನ್ನು ಭೂಮಿ ವಾಪಸ್ ಪಡೆಯಬೇಕು ಅಂತ ಹೇಳಿದ್ದೆ. ನಮ್ಮ ಕ್ಷೇತ್ರದಲ್ಲೂ 1,600 ಎಕರೆಯಷ್ಟು ರೈತರು ಜಮೀನು ಕಳೆದುಕೊಂಡಿದ್ದಾರೆ. ಹೆಚ್ಚು ಕಡಿಮೆ 30 ವರ್ಷ ಆಗಿದೆ. ನೈಸ್‌ನವರು ತೆಗೆದುಕೊಳ್ಳುತ್ತಿಲ್ಲ. ಅದರ ಹಣ ಕೊಡದೆ ಇಕ್ಕಿಟ್ಟಿಗೆ ಸಿಲುಕಿಸಿದ್ದಾರೆ. ಎಲ್ಲವನ್ನೂ ವಾಪಸ್ ತೆಗೆದುಕೊಳ್ಳಬೇಕು ಅಂತ ಕ್ಯಾಬಿನೆಟ್ ನಲ್ಲೂ ಇತ್ತು. ಸಬ್ ಕಮಿಟಿಯಲ್ಲೂ ಇತ್ತು. ಅದಕ್ಕೆ ಈಗ ಚಾಲನೆ ಕೊಟ್ಟಿದ್ದೇವೆ ಎಂದು ಮಾಹಿತಿ ನೀಡಿದರು.
ಕುಡಿಯುವ ನೀರಿನ ಸಮಸ್ಯೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಕುಡಿಯುವ ನೀರಿಗೆ ಆಹಾಕಾರ ಇರುವುದು ನಿಜ. ಎಲ್ಲಾ ಕ್ಷೇತ್ರಗಳಿಗೆ ಬೋರ್ವೆಲ್, ಟ್ಯಾಂಕರ್ ಮೂಲಕ ನೀರು ಬಿಡಲು ಹಣ ಬಿಡುಗಡೆ ಆಗಿದೆ. ನಮ್ಮ ಕ್ಷೇತ್ರಕ್ಕೆ ಏಳೂವರೆ ಕೋಟಿ ಹಣ ಕೊಟ್ಟಿದ್ದಾರೆ ಎಂದರು.
ಸರ್ಕಾರದ ಉಚಿತ ಯೋಜನೆಗಳು ತಲುಪದ ವಿಚಾರದಲ್ಲಿ ನನ್ನ ಕ್ಷೇತ್ರದಲ್ಲಿ ಗೃಹಲಕ್ಷ್ಮಿ ಹಣ ತಲುಪಿಸಲು ಸಭೆ ಮಾಡಿದ್ದೇವೆ. ತಲುಪದವರಿಗೆ ಕರೆ ಮಾಡಿ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಗೃಹಜ್ಯೋತಿ ಯೋಜನೆ ಕೂಡ ತಲುಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಸೋಮಶೇಖರ್ ಹೇಳಿದರು.
ಇದನ್ನೂ ಓದಿ :ಧಾರವಾಡ ಲೋಕಸಭಾ ಕ್ಷೇತ್ರ: ಕಾಂಗ್ರೆಸ್ನಲ್ಲಿ ಹೆಚ್ಚಿದ ಆಕಾಂಕ್ಷಿತರು.. ಯಾರ 'ಕೈ' ಹಿಡಿಯುತ್ತೆ ಹೈಕಮಾಂಡ್?