ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಮಾನ ನೀಡಿದರೆ ಹಗಲಿರುಳು ಪಕ್ಷಕ್ಕಾಗಿ ಶ್ರಮಿಸುತ್ತೇನೆ. ಒಂದು ವೇಳೆ ರಾಜ್ಯಾಧ್ಯಕ್ಷ ಸ್ಥಾನ ನೀಡದೇ ಹೋದರೆ ಕಾರ್ಯಕರ್ತರ ಅಭಿಪ್ರಾಯದ ಮೇರೆಗೆ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ ಎಂದು ಮಾಜಿ ಸಚಿವ ವಿ. ಸೋಮಣ್ಣ ಹೇಳಿದರು.
ಭಾನುವಾರ(ನಿನ್ನೆ) ವಿಜಯನಗರದಲ್ಲಿರುವ ತಮ್ಮ ಕಚೇರಿಯಲ್ಲಿ ವಾರ್ಡ್ ಮಟ್ಟದ ಕಾರ್ಯಕರ್ತರ ಸಭೆ ನಡೆಸಿ ಮಾತನಾಡಿದ ಅವರು, ಗೋವಿಂದರಾಜ ನಗರ ಕ್ಷೇತ್ರವನ್ನು ಮೂಲಭೂತ ಸೌಲಭ್ಯದ ಮೂಲಕ ರಾಜ್ಯದ ಮಾದರಿ ವಿಧಾನಸಭಾ ಕ್ಷೇತ್ರವನ್ನಾಗಿ ಮಾಡಿದ್ದೇವೆ. ಬಿಜೆಪಿ ಹೈಕಮಾಂಡ್ ಮಾತಿಗೆ ಗೌರವ ನೀಡಿ ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದೆ. ಗೋವಿಂದರಾಜ ನಗರ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಸುಲಭವಾಗಿತ್ತು. ಆದರೆ ವರಿಷ್ಠರ ತೀರ್ಮಾನಕ್ಕೆ ಗೌರವ ನೀಡಿ ಕ್ಷೇತ್ರ ಬಿಟ್ಟು ವರುಣಾ, ಚಾಮರಾಜನಗರಕ್ಕೆ ಹೋಗಿದ್ದೆ ಎಂದು ಹೇಳಿದರು.
ಹೈಕಮಾಂಡ್ಗೆ ಪರೋಕ್ಷ ಎಚ್ಚರಿಕೆ:ಈ ಬಾರಿಯ ಚುನಾವಣೆಯಲ್ಲಿ ನನ್ನ ಸೋಲಿಗೆ ಪಕ್ಷದಲ್ಲಿರುವ ಅಸಮಾಧಾನ ಕಾರಣವಾಯಿತು. ಹಿರಿಯ ಮುಖಂಡರುಗಳ ಪಕ್ಷ ವಿರೋಧಿ ಕೆಲಸದಿಂದ ನನಗೆ ಸೋಲುಂಟಾಯಿತು. ಕಳೆದ 40 ವರ್ಷಗಳಿಂದ ರಾಜ್ಯ ರಾಜಕಾರಣದ ಆಗುಹೋಗು ನನಗೆ ಗೊತ್ತು. 365 ದಿನವೂ ಜನರ ನಡುವೆ ಇದ್ದು ಜನ ಸಂಘಟನೆ ಮಾಡಿದ ಅನುಭವವಿದೆ. ಆದ್ದರಿಂದ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಮಾನ ಕೊಡಿ ಎಂದು ಕೇಳಿದ್ದೇನೆ. ಪಕ್ಷ ಸ್ಥಾನ ಕೊಟ್ಟರೆ ಹಗಲಿರುಳು ಪಕ್ಷಕ್ಕಾಗಿ ಶ್ರಮಿಸುವೆ. ಕೊಡದೇ ಹೋದರೆ ಕಾರ್ಯಕರ್ತರ ಸಭೆ ಕರೆದು ಮುಂದಿನ ತೀರ್ಮಾನ ಪ್ರಕಟ ಮಾಡುತ್ತೇನೆ ಎಂದು ಕಾರ್ಯಕರ್ತರ ಸಭೆಯಲ್ಲಿ ಹೇಳಿಕೆ ನೀಡುವ ಮೂಲಕ ಪಕ್ಷದ ಹೈಕಮಾಂಡ್ಗೆ ಪರೋಕ್ಷವಾಗಿ ಎಚ್ಚರಿಕೆ ರವಾನಿಸಿದ್ದಾರೆ.
ಚುನಾವಣೆಯಲ್ಲಿ ಸೋಲಾಗುತ್ತಿದ್ದಂತೆ ದೆಹಲಿಗೆ ತೆರಳಿ ವರಿಷ್ಠರನ್ನು ಭೇಟಿಯಾಗಿದ್ದ ಸೋಮಣ್ಣ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದರು. ನಂತರ ರಾಜ್ಯಕ್ಕೆ ವಾಪಸ್ ಆಗಿ ಮಾಧ್ಯಮಗೋಷ್ಟಿ ನಡೆಸಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬೇಡಿಕೆ ಇಟ್ಟಿರುವುದಾಗಿ ಮಾಹಿತಿ ನೀಡಿ ಬೇಡಿಕೆಯನ್ನು ಪುನರುಚ್ಚಸಿದ್ದರು. ಆದರೆ ಎರಡು ತಿಂಗಳಾದರೂ ರಾಜ್ಯಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಯಾವುದೇ ನಿರ್ಧಾರ ಮಾಡಿಲ್ಲ. ಇದರಿಂದ ಬೇಸರಗೊಂಡಿರುವ ಸೋಮಣ್ಣ ನಿನ್ನೆ ಮತ್ತೊಮ್ಮೆ ರಾಜ್ಯಾಧ್ಯಕ್ಷ ಸ್ಥಾನದ ಬೇಡಿಕೆ ಇಟ್ಟಿದ್ದಾರೆ.