ಬೆಂಗಳೂರು:ಪರಿಷ್ಕೃತ ಪಠ್ಯಗಳಲ್ಲಿನ ಕೆಲವು ತಪ್ಪುಗಳನ್ನು ಸರಿಪಡಿಸಿ ಕಳೆದುಹೋದ ಮಾನ ಕಾಪಾಡುವ ವ್ಯರ್ಥ ಪ್ರಯತ್ನವನ್ನು ರಾಜ್ಯ ಬಿಜೆಪಿ ಸರ್ಕಾರ ಮಾಡಿದೆ. ಹಾಕಿರುವ ತೇಪೆಗಳಿಗಿಂತ ಉಳಿದಿರುವ ತೂತುಗಳೇ ಹೆಚ್ಚಾಗಿವೆ. ಹೊಸ ಪಠ್ಯವನ್ನು ರದ್ದುಪಡಿಸಿ ಹಳೆಯ ಪಠ್ಯವನ್ನೇ ಮುಂದುವರಿಸುವುದೊಂದೇ ಈಗಿನ ಪರಿಹಾರ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಪರಿಷ್ಕೃತ ಪಠ್ಯಕ್ಕೆ ವಿರೋಧ ವ್ಯಕ್ತವಾದ ನಂತರ ರಾಜ್ಯ ಬಿಜೆಪಿ ಸರ್ಕಾರ ದಿನಕ್ಕೊಂದು ಹೇಳಿಕೆ ನೀಡಿ ತನ್ನ ತಪ್ಪನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಪಠ್ಯ ಪರಿಷ್ಕರಣೆಗೆ ರಚನೆಗೊಂಡ ಸಮಿತಿಯನ್ನೇ ರದ್ದುಗೊಳಿಸಿದ ನಂತರ ಅದರ ಶಿಫಾರಸಿನ ಪಠ್ಯ ಕೂಡ ರದ್ದಿಗೆ ಸೇರಬೇಕಲ್ಲವೇ? ರಾಜ್ಯ ಬಿಜೆಪಿ ಸರ್ಕಾರದ ಆದೇಶ ಇಲ್ಲದೆ ರಚನೆಗೊಂಡ ರೋಹಿತ್ ಚಕ್ರತೀರ್ಥ ಎಂಬ ಬುದ್ಧಿಗೇಡಿಯ ಅಧ್ಯಕ್ಷತೆಯ ಸಮಿತಿಯೇ ಅಕ್ರಮವಾಗಿರುವಾಗ, ಆ ಸಮಿತಿ ಪರಿಷ್ಕೃರಿಸಿರುವ ಪಠ್ಯ ಹೇಗೆ ಕ್ರಮಬದ್ಧವಾಗಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.
ಪರಿಷ್ಕೃತ ಪಠ್ಯದಲ್ಲಿರುವುದು ಬೆರಳೆಣಿಕೆಯ ತಪ್ಪುಗಳಲ್ಲ, ಅದರ ಪುಟ-ಪುಟಗಳಲ್ಲಿಯೂ ತಪ್ಪುಗಳಿರುವುದನ್ನು ನಾಡಿನ ಅನೇಕ ಶಿಕ್ಷಣ ತಜ್ಞರು ವಿವರವಾಗಿ ಪಟ್ಟಿಮಾಡಿ ರಾಜ್ಯ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಹೀಗಿದ್ದರೂ ದೋಷಪೂರ್ಣ ಪಠ್ಯವನ್ನು ಸಮರ್ಥಿಸಲು ಹೊರಟಿರುವುದು ಸರ್ಕಾರದ ಉದ್ದಟತನವನ್ನಷ್ಟೇ ತೋರಿಸುತ್ತದೆ ಎಂದಿದ್ದಾರೆ.