ಬೆಂಗಳೂರು :ಈ ಸಂದರ್ಭದಲ್ಲಿ ಯಡಿಯೂರಪ್ಪ ಬದಲಾವಣೆ ಮಾಡಿದ್ರೆ ಬಿಜೆಪಿಗೆ ಕಷ್ಟ. ಅವರ ದುರಾದೃಷ್ಟ ಅವರೇ ಅನುಭವಿಸ್ತಾರೆ ಎಂದು ಕಾಂಗ್ರೆಸ್‌ನ ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ. ನಗರದ ಅಖಿಲ ಭಾರತ ವೀರಶೈವ ಮಹಾಸಭಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ನಿಲುವು ಈಗಲೂ ಅದೇ ಇದೆ. ಯಡಿಯೂರಪ್ಪ ಬಿಜೆಪಿ ಪಕ್ಷ ಕಟ್ಟಿದವರು.
ಅವರಿಗೆ ಅನ್ಯಾಯ ಆಗಬಾರದು. ಹಾಗಂತಾ, ನಾವೇನು ಲಿಂಗಾಯತ ಸಮುದಾಯ ಸೆಳೆಯೋ ಪ್ರಯತ್ನ ಮಾಡುತ್ತಿಲ್ಲ. ಹೆಲಿಕಾಪ್ಟರ್ ಇದಾವೆ, ಬೆಂಜ್ ಕಾರ್ ಇದ್ದಾವೆ. ನನಗೇ ಇನ್ನೇನು ಬೇಕು, ಸಾಕಲ್ಲ ಜೀವನ ಮಾಡೋಕೆ. ನಾಯಕತ್ವ ಆಮೇಲೆ ನೊಡೋಣ, ಅಂತಹ ಸಂದರ್ಭ ಬಂದರೆ ಎಂದರು.
ಶಾಮನೂರು ಶಿವಶಂಕರಪ್ಪ ಹೇಳಿಕೆ ಸಿಎಂ ಬಿಎಸ್‌ವೈ ಬದಲಾವಣೆ ಮಾಡುವ ವಿಚಾರವಾಗಿ ಶ್ರೀಶೈಲ ಜಗದ್ಗುರು ಚೆನ್ನಸಿದ್ಧರಾಮ ಶಿವಾಚಾರ್ಯರು ಮಾತನಾಡಿ, ಕಳೆದ ಎರಡ್ಮೂರು ದಿನಗಳಿಂದ ಬೆಳವಣಿಗೆ ನಡೆದಿವೆ. ಬೇರೆ ಬೇರೆ ಚರ್ಚೆ, ಹೇಳಿಕೆ ಬರ್ತಿವೆ. ಸಿಎಂ ಯಡಿಯೂರಪ್ಪ ಸಂಕಷ್ಟ ಪರಿಸ್ಥಿತಿ ನಿಭಾಯಿಸಿದ್ದಾರೆ. ನೆರೆ ಹಾವಳಿ, ಕೊರೊನಾ ಹಾವಳಿ ನಿಭಾಯಿಸಿದ್ದಾರೆ. ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದಾರೆ. ಇಳಿ ವಯಸ್ಸಿನಲ್ಲೂ ಜವಾಬ್ದಾರಿಯುತವಾಗಿ ನಡೆಯುತ್ತಿದ್ದಾರೆ.
ವರಿಷ್ಠರು ಮಾಡುತ್ತಿರುವ ಚರ್ಚೆ ಸೂಕ್ತವಲ್ಲ. ಅವರು ಉಳಿದ ಅವಧಿ ಪೂರ್ಣಗೊಳಿಸಲು ನೆರವಾಗಬೇಕು. ರಾಜ್ಯದ ಹಿತ, ಪಕ್ಷದ ಹಿತ ಕಾಪಾಡಬೇಕು. ಮಧ್ಯದಲ್ಲಿ ಬದಲಾವಣೆ ಮಾಡಿದರೆ ಪಕ್ಷ ಮತ್ತು ಸರ್ಕಾರಕ್ಕೂ ನಷ್ಟವುಂಟಾಗುತ್ತದೆ ಎಂದರು.
ಸನ್ಯಾಸಿಗಳಿಗೆ ರಾಜಕಾರಣ ಏಕೆ ಎಂಬ ಪ್ರಶ್ನೆಗೆ ಉತ್ತರಿಸಿ, ಸನ್ಯಾಸ ಆಧ್ಯಾತ್ಮ, ಧರ್ಮಕ್ಕೆ ಸೀಮಿತವಾಗಿತ್ತು. ಇವತ್ತು ಜನತೆಯ ಹಿತ ಕಾಪಾಡುವುದು ಮುಖ್ಯ. ರಾಜ್ಯದ ಜನತೆಯ ಹಿತವನ್ನು ನೋಡಬೇಕು. ಹಾಗಾಗಿ, ಮಠಾಧೀಶರು ಬರುತ್ತಾರೆ. ಮಠಾಧೀಶರು ರಾಜಕಾರಣಕ್ಕೆ ಬರುತ್ತಿಲ್ಲ. ಸಮಾಜದ ಹಿತ, ಜನತೆಯ ಹಿತ ಕಾಪಾಡುವುದು ಮುಖ್ಯ. ಹಾಗಾಗಿ, ನಾವು ಮಧ್ಯಪ್ರವೇಶ ಮಾಡಬೇಕಿದೆ.
ಯುಪಿಯಲ್ಲಿ ಆದಿತ್ಯನಾಥರು ಸನ್ಯಾಸಿಗಳಲ್ಲವೇ?. ಸನ್ಯಾಸದ ಜೊತೆಗೆ ರಾಜಕಾರಣ ಮಾಡುತ್ತಿದ್ದಾರೆ. ಪಕ್ಷ ಯಾವುದೇ ಇರಬಹುದು. ಹಾಗಂತಾ, ನಾವು ರಾಜಕಾರಣಕ್ಕೆ ಬರುತ್ತಿಲ್ಲ. ರಾಜಕಾರಣದಲ್ಲಿರುವ ನ್ಯೂನತೆ ಸರಿ ಮಾಡುತ್ತಿದ್ದೇವೆ. ಯಡಿಯೂರಪ್ಪ ಕುಟುಂಬದ ಮೇಲೆ ಭ್ರಷ್ಟಾಚಾರದ ಆರೋಪ ವಿಚಾರ ಮಾತನಾಡಿ, ಭ್ರಷ್ಟಾಚಾರದ ಬಗ್ಗೆ ನಾವು ತಿಳಿ ಹೇಳಿದ್ದೇವೆ.
ವಿಜಯೇಂದ್ರಗೂ ನಾವು ಹೇಳಿದ್ದೇವೆ. ತನ್ನ ಮೇಲಿನ ಆರೋಪ ಸಾಬೀತುಪಡಿಸಲಿ. ರಾಜಕಾರಣದಿಂದ ತಾನು ನಿವೃತ್ತಿಯಾಗ್ತೇನೆ ಅಂತಾ ವಿಜಯೇಂದ್ರ ನಮಗೆ ಹೇಳಿದ್ದಾರೆ. ನಾವು ಕಿವಿ ಹಿಂಡುವ ಕೆಲಸ ಮಾಡುತ್ತಿದ್ದೇವೆ ಎಂದರು.
ಇದನ್ನೂ ಓದಿ : ಸಿಎಂ ಭೇಟಿ ಮಾಡಿದ ಸಿದ್ಧಗಂಗಾ ಶ್ರೀ.. ಬಿಎಸ್‌ವೈ ಜೊತೆ ಮಹತ್ವದ ಚರ್ಚೆ
ಯಡಿಯೂರಪ್ಪಗೆ ವಯಸ್ಸಾಗಿದೆ ಎಂಬುದು ಸರಿಯಲ್ಲ. ಚುನಾವಣೆಗೆ ಹೋಗುವಾಗ ಅವರಿಗೆ ವಯಸ್ಸಾಗಿರಲಿಲ್ವೇ? ಆಗ ಯಡಿಯೂರಪ್ಪನವರನ್ನ ಬಿಡಬಹುದಿತ್ತಲ್ವೇ? ಈಗೇಕೆ ಅವರನ್ನ ಕೆಳಗಿಳಿಸಬೇಕು? ಮುಂದೆ ಯಾರು ಅನ್ನೋದು ಚರ್ಚೆ ಮಾಡಿಲ್ಲ. ಈಗಿರುವವರನ್ನ ಎರಡು ವರ್ಷ ಮುಂದುವರಿಸಿ ಅನ್ನೋದಷ್ಟೇ ನಮ್ಮ ವಾದ ಎಂದರು.