ಬೆಂಗಳೂರು:ಐಎಂಎ ಬಹುಕೋಟಿ ವಂಚನೆ ಪ್ರಕರಣದಲ್ಲಿ ಜೈಲು ಸೇರಿದ್ದ ರೋಷನ್ ಬೇಗ್ ಇದೀಗ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಗೊಂಡರು. ಮಾಧ್ಯಮದೊಂದಿಗೆ ಮಾತನಾಡದೇ ಹೊರಟುಹೋದರು.
ಸಿಬಿಐ ವಿಶೇಷ ನ್ಯಾಯಾಲಯ ಇಂದು ವಿಚಾರಣೆ ನಡೆಸಿ, ರೋಷನ್ ಬೇಗ್ ಅವರಿಗೆ ಷರತ್ತು ಬದ್ಧ ಜಾಮೀನು ನೀಡಿ ತೀರ್ಪು ಹೊರಡಿಸಿತು. ಆ ಮೂಲಕ ಮಾಜಿ ಸಚಿವರಿಗೆ ಷರತ್ತು ವಿಧಿಸಿದ ಕೋರ್ಟ್, ಸಿಬಿಐ ತನಿಖೆಗೆ ಸಹಕರಿಸಬೇಕು ಯಾವುದೇ ಸಾಕ್ಷಿಗಳನ್ನು ನಾಶಪಡಿಸುವಂತಿಲ್ಲ ಎಂದು ರೋಷನ್ ಬೇಗ್ಗೆ ಆದೇಶಿಸಿದೆ.
ಪ್ರಕರಣ ಸಂಬಂಧ ರೋಷನ್ ಬೇಗ್ ಪರ ಹಿರಿಯ ವಕೀಲ ಶಶಿಕಿರಣ್ ವಾದ ಮಂಡಿಸಿ 2018ರ ಆರೋಪವನ್ನು ಆಧರಿಸಿ ಈಗ ರೋಷನ್ ಬೇಗ್ ಅವರನ್ನು ಬಂಧಿಸಲಾಗಿದೆ. ಜೊತೆಗೆ ರೋಷನ್ ಬೇಗ್ ಅವರು ಸಿಬಿಐ ತನಿಖೆಗೆ ಸಂಪೂರ್ಣವಾಗಿ ಸಹಕರಿಸಿದ್ದಾರೆ. ಸಿಬಿಐ ದಾಖಲಿಸಿರುವ ಪ್ರಕರಣದಲ್ಲಿ ಹುರುಳಿಲ್ಲ ಎಂದು ವಾದ ಮಂಡಿಸಿದ್ದರು.
ಪ್ರಕರಣ ಸಂಬಂಧ 36 ಆರೋಪಿಗಳ ಪೈಕಿ 35 ಆರೋಪಿಗಳಿಗೆ ಜಾಮೀನು ಸಿಕ್ಕಿದೆ. ರೋಷನ್ ಬೇಗ್ ಅವರಿಗೆ ಅನಾರೋಗ್ಯ ಸಮಸ್ಯೆ ಇದೆ. ಈ ಹಿನ್ನೆಲೆ ರೋಷನ್ ಪರ ವಕೀಲರು ಜಾಮೀನು ನೀಡುವಂತೆ ಕೋರ್ಟ್ಗೆ ಮನವಿ ಮಾಡಿದರು. ವಾದ-ಪ್ರತಿವಾದಗಳನ್ನು ಆಲಿಸಿದ ಸಿಬಿಐ ವಿಶೇಷ ನ್ಯಾಯಾಲಯ ರೋಷನ್ ಬೇಗ್ಗೆ ಷರತ್ತುಬದ್ಧ ಜಾಮೀನು ನೀಡಿ ಆದೇಶಿಸಿತು.
ತಂದೆಯನ್ನು ಸಮರ್ಥಿಸಿಕೊಂಡ ಮಗ:
ನನ್ನ ತಂದೆ ರೋಷನ್ ಬೇಗ್ ಅವರಿಗೆ ವಿಶೇಷ ಸಿಬಿಐ ನ್ಯಾಯಾಲಯವು ಇಂದು ಜಾಮೀನು ನೀಡಿದೆ. ಸಿಬಿಐ ನಡೆಸಿದ ಕಠಿಣ ತನಿಖೆಯ ಉದ್ದಕ್ಕೂ, ನಮ್ಮ ವಿರುದ್ಧ ಯಾವುದೇ ದೋಷಾರೋಪಣೆಯ ಪುರಾವೆಗಳು ಕಂಡುಬಂದಿಲ್ಲ. ಐಎಂಎ ಬಹುಕೋಟಿ ವಂಚನೆಯ ಪ್ರಮುಖ ಆರೋಪಿ ಮಾಡಿದ ಅಸಂಬದ್ಧ ಆರೋಪ ಮತ್ತು ಹೇಳಿಕೆಗಳಿಗೆ ಯಾವುದೇ ಆಧಾರವಿಲ್ಲ ಎಂದು ಪತ್ರಿಕಾ ಪ್ರಕಠಣೆ ನೀಡಿದ್ದಾರೆ.
ಹೂಡಿಕೆ ಮಾಡಿದರೆ ಹೆಚ್ಚು ಬಡ್ಡಿ ಹಣ ನೀಡುವುದಾಗಿ ಸಾವಿರಾರು ಗ್ರಾಹಕರಿಗೆ ಆಮಿಷವೊಡ್ಡುತ್ತಿದ್ದ ಐಎಂಎ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಮೊಹಮ್ಮದ್ ಮನ್ಸೂರ್ ಖಾನ್ನಿಂದ ರೋಷನ್ ಬೇಗ್ ಕೋಟ್ಯಂತರ ರೂ. ಕಿಕ್ ಬ್ಯಾಕ್ ಪಡೆದ ಆರೋಪವಿದೆ. ಮನ್ಸೂರ್ ಖಾನ್ ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದ ವಿಡಿಯೋದಲ್ಲಿ ಬೇಗ್ ತನ್ನಿಂದ 400 ಕೋಟಿ ರೂ. ಪಡೆದುಕೊಂಡಿದ್ದಾರೆ ಎಂದು ಆರೋಪಿಸಿದ್ದ. ಇದಕ್ಕೆ ಪೂರಕವಾಗಿ ಮನ್ಸೂರ್ ಖಾನ್ 2019 ಜೂನ್ 9ರಂದು ಆಡಿಯೋ ಬಿಡುಗಡೆ ಮಾಡಿದ್ದ. ಈ ಆಡಿಯೋದಲ್ಲಿ ರೋಷನ್ ಬೇಗ್ ಅವರಿಗೆ 400 ಕೋಟಿ ರೂ. ಹಣ ನೀಡಿದ್ದೆ ಎಂದು ಹೇಳಿದ್ದರು. ಈ ಸಂಬಂಧ ತನಿಖೆ ಬಳಿಕ ನವೆಂಬರ್ 22 ರಂದು ರೋಷನ್ ಬೇಗ್ರನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ 36ನೇ ಆರೋಪಿಯಾಗಿರುವ ರೋಷನ್ ಬೇಗ್ ಈವರೆಗೂ ನ್ಯಾಯಾಂಗ ಬಂಧನದಲ್ಲಿದ್ದರು. ಸದ್ಯ ಷರತ್ತು ಬದ್ಧ ಜಾಮೀನು ಸಿಕ್ಕಿ ಹೊರ ಬಂದಿದ್ದಾರೆ.