ಬೆಂಗಳೂರು : ಎರಡು ದಿನದಿಂದ ದಿಲ್ಲಿಯಲ್ಲೇ ಬೀಡು ಬಿಟ್ಟಿರುವ ಮಾಜಿ ಸಚಿವ ರೋಷನ್ ಬೇಗ್, ಇಂದು ಐಎಂಎ ಜ್ಯುವೆಲರ್ಸ್ ಅವ್ಯವಹಾರದಲ್ಲಿ ತಮ್ಮ ಹೆಸರು ಕೇಳಿ ಬಂದಿರುವುದಕ್ಕೆ ಇನ್ನೊಂದು ಸ್ಪಷ್ಟನೆಯನ್ನು ನೀಡಿದ್ದಾರೆ.
ಟ್ವಿಟರ್ ಮೂಲಕ ಮಾಹಿತಿ ನೀಡಿರುವ ಅವರು, ನನ್ನ ಇತ್ತೀಚಿನ ರಾಜಕೀಯ ಹಿನ್ನಡೆಗಳ ನಂತರ, ನನ್ನ ಎದುರಾಳಿಗಳು ನನ್ನ ಪಾತ್ರವನ್ನು ಸಂಪೂರ್ಣ ಹದಗೆಡಿಸುವ ಹಾಗೂ ನಾಶಮಾಡುವ ನಿಟ್ಟಿನಲ್ಲಿ ಪೂರ್ಣ ಪ್ರಮಾಣದ ಪ್ರಯತ್ನವನ್ನು ಮಾಡಿದ್ದಾರೆ. ಆಧಾರ ರಹಿತವಾದ, ತನಿಖೆ ಮಾಡದ ಆಡಿಯೋ ರೆಕಾರ್ಡಿಂಗ್ ಬಳಸಿ ನನ್ನನ್ನು ಹತ್ತಿಕ್ಕುವ ಯತ್ನ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಕಾರಣದಿಂದ ಈ ಐಎಂಎ ಅವ್ಯವಹಾರದ ಹಾಗೂ ಐಎಂಎ ಫಾರೂಕ್ ವಿರುದ್ಧ ತನಿಖೆಯನ್ನು ಅತ್ಯಂತ ಉನ್ನತ ತನಿಖಾ ಸಂಸ್ಥೆಗೆ ವಹಿಸಬೇಕು. ಸಿಬಿಐ ಅಥವಾ ಎನ್ಐಎ ಇಲ್ಲವೇ ಎಸ್ಎಫ್ಐಒ ಸಂಸ್ಥೆಗೆ ವಹಿಸಬೇಕೆಂದು ಪ್ರಾಮಾಣಿಕ ಸಲಹೆ ಹಾಗೂ ಮನವಿ ಮಾಡುತ್ತೇನೆ. ನನ್ನ ರಾಜಕೀಯ ಬೆಳವಣಿಗೆಯನ್ನು ಇತ್ತೀಚಿನ ದಿನಗಳಲ್ಲಿ ಹತ್ತಿಕ್ಕುವ ಯತ್ನ ನಡೆಯುತ್ತಿದ್ದು, ಇದರ ಮರ್ಮ ಅರಿಯದೇ ಕೆಲ ಮಾಧ್ಯಮಗಳು ಕೂಡ ನನ್ನನ್ನು ಸಂಪರ್ಕಿಸದೇ, ಬಿಡುಗಡೆಯಾಗಿರುವ ಆಡಿಯೊ ಮಾಹಿತಿಯನ್ನೇ ಬಳಸಿಕೊಂಡು ಸುದ್ದಿ ಪ್ರಕಟಿಸುತ್ತಿವೆ. ಇದು ನನಗೆ ಅತೀವ ಬೇಸರ ತಂದಿದೆ ಎಂದಿದ್ದಾರೆ.
ಐಎಂಎನಲ್ಲಿ ಹಣ ಹೂಡಿಕೆ ಮಾಡುವ ಕಲ್ಪನೆಯನ್ನು ನಾನು ಎಂದಿಗೂ ಕೂಡ ಮಾಡಿಲ್ಲ. ನನ್ನ ಹಾಗೂ ಐಎಂಎ ನಡುವಿನ ಸಂಬಂಧ ಇದ್ದದ್ದು ಪಿಪಿಪಿ ಮಾದರಿಯಲ್ಲಿ ಶಿವಾಜಿನಗರದ ವಿಕೆಒ ಶಾಲೆಯ ಅಭಿವೃದ್ಧಿ ಕಾಮಗಾರಿಯ ವಿಚಾರದಲ್ಲಿ ಮಾತ್ರ. ಇನ್ನೊಂದು ವಿಚಾರವೆಂದರೆ, ಐಎಂಎಗೆ ವ್ಯಾಪಕ ಪ್ರಮಾಣದಲ್ಲಿ ರಾಜಕಾರಣಿಗಳ ಹಾಗೂ ಈ ಸಮುದಾಯದ ಮುಖಂಡರೊಂದಿಗೆ ಸಂಪರ್ಕ ಹಾಗೂ ಸಂಬಂಧ ಇದೆ. “ಸಮುದಾಯದ ಮುಖ’ ಆಗಬೇಕೆಂದು ಬಯಸುವ ಕೆಲ ಮುಖಂಡರು ಸೃಷ್ಟಿಸಿದ ಕೃತ್ಯ ಇದಾಗಿದೆ. ನನಗೆ ಬಂದ ಮಾಹಿತಿ ಪ್ರಕಾರ ಐಎಂಎ ಜ್ಯುವೆಲರ್ಸ್ ಎದುರು ಪ್ರತಿಭಟನೆ ನಡೆಸುತ್ತಿರುವ ಹಣ ಕಳೆದುಕೊಂಡು ನೋವಿನಲ್ಲಿರುವವರ ಮಧ್ಯೆ ಕೆಲವು ಬೇಡದ ವ್ಯಕ್ತಿಗಳನ್ನೂ ಕೂಡ ಸೇರಿಸಲಾಗಿದೆ. ಪ್ರಾಮಾಣಿಕರ ನೋವಿನ ಹೋರಾಟಕ್ಕೆ ಬೇರೆಯದೇ ಮುಖ ನೀಡುವ ಯತ್ನ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನನ್ನ ಅಧಿಕೃತ ಸಭೆಗಳಲ್ಲಿ ಪಾಲ್ಗೊಳ್ಳಲು ದಿಲ್ಲಿಗೆ ಆಗಮಿಸಿರುವೆ. ಇಡೀ ಸಮಸ್ಯೆಯಿಂದ ಹೊರ ಬಂದಿರುವೆ. ನನ್ನ ಪ್ರವಾಸದ ವೇಳಾಪಟ್ಟಿ ಸಾರ್ವಜನಿಕವಾಗಿತ್ತು ಮತ್ತು ಉದ್ದೇಶಪೂರ್ವಕವಾಗಿ ಇದೇ ಸಂದರ್ಭ ಹುಡುಕಿ ಆಡಿಯೊ ವೈರಲ್ ಮಾಡಲಾಗಿದೆ. ನನ್ನ ಮತದಾರರನ್ನು ಭೇಟಿಯಾಗಿ ವಿವರ ಸಲ್ಲಿಸುವುದಕ್ಕೆ ಕೂಡ ದೌರ್ಬಲ್ಯ ಉಂಟಾಗುವಂತೆ ನನ್ನ ಕೈ ಕಟ್ಟಿಹಾಕಲಾಗಿದೆ. ಆದಾಗ್ಯೂ ನಾನು ನನ್ನ ಕ್ಷೇತ್ರದಲ್ಲಿ ಹಣ ಕಳೆದುಕೊಂಡವರನ್ನು ಹೋಗಿ ಭೇಟಿ ಮಾಡುತ್ತೇನೆ. ಪರಿಶ್ರಮದಿಂದ ದುಡಿದ ದುಡ್ಡನ್ನು ಕಳೆದುಕೊಂಡ ಪ್ರತಿಯೊಬ್ಬ ಬಡವನಿಗೂ ಅವರ ಹಣ ವಾಪಸ್ ಸಿಗುವಂತೆ ಮಾಡುವ ಹೋರಾಟ ಕೈಗೊಳ್ಳುತ್ತೇನೆ ಎಂದಿದ್ದಾರೆ.