ಬೆಂಗಳೂರು: ರಾಜ್ಯ ಸರ್ಕಾರ ಜನಸ್ಪಂದನ ಸಮಾವೇಶದಲ್ಲಿ ಸಾಧನೆ ವಿವರಿಸುವ ಬದಲು ಕಾಂಗ್ರೆಸ್ ವಿರುದ್ಧ ಟೀಕೆ ಹೆಚ್ಚಾಗಿ ಕೇಳಿ ಬಂತು ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿ, ನಿನ್ನೆ ಬಿಜೆಪಿಯವರ ಜನಸ್ಪಂದನ ಸಮಾವೇಶ ದೊಡ್ಡಬಳ್ಳಾಪುರದಲ್ಲಿ ನಡೆಯಿತು. ಹಲವು ಬಾರಿ ಮುಂದೂಡಿ ಜನಾಕ್ರೋಶದ ನಡುವೆ ಸಂಭ್ರಮಾಚರಣೆ ಮಾಡಿರುವ ಬಿಜೆಪಿ ಸ್ನೇಹಿತರಿಗೆ ಮೊದಲು ಅಭಿನಂದನೆ ಸಲ್ಲಿಸುತ್ತೇನೆ. ನನಗೆ ಇದು ಸರ್ಕಾರದ ಸಾಧನೆಯ ಉತ್ಸವಕ್ಕಿಂತ ಕೇವಲ ಮುಖ್ಯಮಂತ್ರಿ ಹಾಗೂ ಮೂರ್ನಾಲ್ಕು ಮಂತ್ರಿಗಳ ಉತ್ಸವವಾಗಿ ಕಂಡಿತು. ಬೆಲೆ ಏರಿಕೆಯಿಂದ ಜನಸಾಮಾನ್ಯರ ಬೇಬು ಸುಡುತ್ತಿದೆ ಎಂದರು.
ಜನ ಸಾಮಾನ್ಯರು, ಮಹಿಳೆಯರು ಸಂಕಷ್ಟಕ್ಕೆ ಸಿಲುಕಿದ್ದರು. ಬೆಂಗಳೂರು ಮುಳುಗುತ್ತಿದ್ದರೂ, ನಿರುದ್ಯೋಗದಿಂದ ಯುವಕರು ಆಕ್ರೋಶದಲ್ಲಿದ್ದರೂ ನಾವು ಈ ಉತ್ಸವ ಮಾಡಲೇಬೇಕು ಎಂದು ಬಿಜೆಪಿಯವರು ಈ ಕಾರ್ಯಕ್ರಮ ಮಾಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಸರ್ಕಾರದ ಸಾಧನೆ ಹೇಳುವುದಕ್ಕಿಂತ ಕಾಂಗ್ರೆಸ್ ಟೀಕೆ ಮಾಡಿರುವುದೇ ಹೆಚ್ಚಾಗಿ ಕಂಡಿತು ಎಂದು ಹೇಳಿದರು.
ಮುಖ್ಯಮಂತ್ರಿಗಳು ಹೇಳಿರುವ ಅಲ್ಪ ಸಾಧನೆ ಪಟ್ಟಿ ಕೂಡ ಸುಳ್ಳಿನ ಕಂತೆ. ವಿದ್ಯಾನಿಧಿ ಯೋಜನೆ ಅಡಿಯಲ್ಲಿ 20 ಲಕ್ಷ ಫಲಾನುಭವಿಗಳಿದ್ದಾರೆ ಎಂದು ಹೇಳಿದ್ದಾರೆ. ಆದರೆ ಕಳೆದ ತಿಂಗಳು ಘೋಷಣೆಯಾದ ಯೋಜನೆ. ಸರ್ಕಾರದ ಮಾಹಿತಿ ಪ್ರಕಾರ, 10 ಲಕ್ಷಕ್ಕಿಂತ ಹೆಚ್ಚು ಜನ ಅರ್ಜಿ ಹಾಕಿಲ್ಲ. ಆದರೆ 20 ಲಕ್ಷ ಫಲಾನುಭವಿಗಳು ಎಂದು ಹೇಳುತ್ತಾರೆ. 150 ಪರಿಶಿಷ್ಟರು ಹಾಗೂ ಅಲ್ಪಸಂಖ್ಯಾತರಿಗೆ ಹಾಸ್ಟೆಲ್ ನಿರ್ಮಾಣ ಎಂದು ಹೇಳಿದ್ದಾರೆ.
ಹೊಸ ಹಾಸ್ಟೆಲ್ ಕಟ್ಟಿಸಿದ್ದಾರೆ: ಇನ್ನು, ಮುಂದೆ ಅವರು ಭಾಷಣ ಮಾಡುವ ಮುನ್ನ ಬಜೆಟ್ ಪುಸ್ತಕ ನೋಡಿ ಮಾತನಾಡಬೇಕು. ಅವರು ಹಾಸ್ಟೆಲ್ ನಿರ್ಮಾಣಕ್ಕೆ ಅನುದಾನ ಘೋಷಿಸಿರುವುದೇ 259 ಕೋಟಿ. ಇದರಲ್ಲಿ 159 ಹಾಸ್ಟೆಲ್ ನಿರ್ಮಾಣ ಮಾಡಲು ಸಾಧ್ಯವೇ? ನಾನು ಸಮಾಜ ಕಲ್ಯಾಣ ಸಚಿವನಾಗಿದ್ದಾಗ ಕಟ್ಟಿದ ಹಾಸ್ಟೆಲ್ಗಳನ್ನು ಇನ್ನು ಉದ್ಘಾಟನೆ ಮಾಡುತ್ತಿದ್ದಾರೆ. ಕಳೆದ 3 ವರ್ಷಗಳಲ್ಲಿ ಎಷ್ಟು ಹೊಸ ಹಾಸ್ಟೆಲ್ ಕಟ್ಟಿಸಿದ್ದಾರೆ ತೋರಿಸಲಿ. ಬಿಪಿಎಲ್ ಕಾರ್ಡುದಾರರಿಗೆ ಹಾಗೂ ಪರಿಶಿಷ್ಟರಿಗೆ 75 ಯುನಿಟ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ಹೇಳಿದ್ದೀರಿ. ಇದೇ ಆ. 24ರಂದು ಇದನ್ನು ರದ್ದು ಆದೇಶ ಮಾಡಿದಿರಿ. ಕಾಂಗ್ರೆಸ್ ಪ್ರಶ್ನಿಸಿದಾಗ ಆದೇಶಕ್ಕೆ ತಡೆ ನೀಡಿದಿರಿ. ಇದರಲ್ಲಿ ಫಲಾನುಭವಿಗಳೆಷ್ಟು? ಎಂದು ಹೇಳಲಿಲ್ಲ ಎಂದು ವಿವರಿಸಿದರು.
ಒಂದು ಉದ್ಯೋಗವನ್ನು ಸೃಷ್ಟಿಸಿಲ್ಲ: 50 ಸಾವಿರ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡಿದ್ದೀರಿ ಎಂದು ಹೇಳುತ್ತೀರಿ. 2021ರಲ್ಲಿ ಎಷ್ಟು ನಿರುದ್ಯೋಗಿ ಯುವಕರು ಆತ್ಮಹತ್ಯೆ ಮಾಡಿಕೊಂಡಿರುವ ಸಂಖ್ಯೆ ಗೊತ್ತಾ? 30,056 ಆತ್ಮಹತ್ಯೆ ಆಗಿದೆ ಎಂದು ಕೇಂದ್ರ ಸರ್ಕಾರದ ಅಂಕಿ-ಅಂಶ ಹೇಳುತ್ತದೆ. ನೀವು ಭಾಷಣ ಮಾಡುವ ಮುನ್ನ ನಿಮ್ಮ ಮಂತ್ರಿಗಳು ಸದನದಲ್ಲಿ ನೀಡಿರುವ ಉತ್ತರಗಳನ್ನು ಗಮನಿಸಿ. ನಿಮ್ಮ ಬೃಹತ್ ಕೈಗಾರಿಕೆ, ಸಣ್ಣ ಕೈಗಾರಿಕಾ ಹಾಗೂ ಕೌಶಲ್ಯ ಅಭಿವೃದ್ಧಿ ಮೂರು ಇಲಾಖೆ ಸಚಿವರು ಸದನದಲ್ಲಿ ನೀಡಿರುವ ಉತ್ತರದ ಪ್ರಕಾರ, ಕಳೆದ 2 ವರ್ಷಗಳಲ್ಲಿ ನಾವು ನಮ್ಮ ಇಲಾಖೆಯಿಂದ ಒಂದು ಉದ್ಯೋಗವನ್ನು ಸೃಷ್ಟಿಸಿಲ್ಲ ಎಂದು ಹೇಳಿದ್ದಾರೆ.
ಇವರ ಮೂರು ವರ್ಷಗಳ ಆಡಳಿತದಲ್ಲಿ ಉದ್ಯೋಗ ಮೇಳದಿಂದ 1600ಕ್ಕಿಂತ ಹೆಚ್ಚು ಉದ್ಯೋಗ ಕೊಡಿಸಿಲ್ಲ. ಇನ್ನು 1600 ರೈಲ್ವೇ ಮಾರ್ಗ ವಿದ್ಯುತೀಕರಣ ಮಾಡಿದ್ದೇವೆ ಎಂದು ಘಂಟಾಘೋಷವಾಗಿ ಹೇಳಿದ್ದಾರೆ. ಮೋದಿಯವರು ಇವರಿಗೆ ಸಾಧನೆ ಮಾಡುವುದು ಹೇಗೆ? ಎಂದು ಹೇಳಿಕೊಡದಿದ್ದರೂ ಸುಳ್ಳು ಹೇಳುವುದನ್ನು ಚೆನ್ನಾಗಿ ಹೇಳಿಕೊಟ್ಟಿದ್ದಾರೆ.