ಬೆಂಗಳೂರು : ಸಚಿವ ಸತೀಶ್ ಜಾರಕಿಹೊಳಿ ಭದ್ರಕೋಟೆಯ ಒಂದೊಂದೇ ಕಲ್ಲು ಕಳಚಿ ಹೋಗುತ್ತಿದೆ. ಸತೀಶ್ ಜಾರಕಿಹೊಳಿ ದುರ್ಬಲವಾಗುತ್ತಿದ್ದಾರೆ. ಬೆಳಗಾವಿಯಲ್ಲಿ ಅವರಿಗೆ ಇದ್ದ ವರ್ಚಸ್ಸು ಕಡಿಮೆ ಆಗುತ್ತಿದೆ. ಮುಂದಿನ ದಿನಗಳಲ್ಲಿ ಅವರು ಮೂಲೆ ಗುಂಪು ಆಗುತ್ತಾರೆ. ಬೆಳಗಾವಿ ಟಿಕೆಟ್ ಕೂಡ ಹೆಬ್ಬಾಳ್ಕರ್ ಕಡೆಯವರ ಪಾಲಾಗಲಿದೆ ಎಂದು ಮಾಜಿ ಸಚಿವ ಮುನಿರತ್ನ ಭವಿಷ್ಯ ನುಡಿದಿದ್ದಾರೆ.
ವೈಯಾಲಿಕಾವಲ್ ಕಚೇರಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೆಳಗಾವಿಯಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಲಕ್ಷ್ಮಿ ಹೆಬ್ಬಾಳ್ಕರ್ ವಾಗ್ವಾದ ಮತ್ತೆ ಮುನ್ನಲೆಗೆ ಬಂದಿದೆ. ಮೊದಲು ಇದ್ದಂತ ವಾತಾವರಣ ನೀನಾ ನಾನಾ ಅಂತ ಇತ್ತು. ಅಂದರೆ ರಮೇಶ್ ಜಾರಕಿಹೊಳಿನಾ, ಹೆಬ್ಬಾಳ್ಕರ್ನಾ ಅನ್ನುವಂತಿತ್ತು. ಈಗ ನಾನಾ, ನೀನಾ ಅಂತ ಆಗಿದೆ. ಇಷ್ಟೇ ವ್ಯತ್ಯಾಸ. ಏನೇ ಅದರೂ ಈ ರಾಜ್ಯಕ್ಕೆ, ಬೆಳಗಾವಿಗೆ ಹತ್ತಿರದ ಸಂಬಂಧವಿದೆ. ಏನೇ ಆದರೂ ಬೆಳಗಾವಿಯಿಂದಲೇ ಪ್ರಾರಂಭ ಆಗೋದು. ಬೆಳಗಾವಿಯಲ್ಲಿ ಸುವರ್ಣಸೌಧ ಕಟ್ಟಿದೆವು, ಆಗಿನಿಂದಲೇ ನೀನಾ ನಾನಾ, ನಾನಾ ನೀನಾ ಅಂತ ಶುರುವಾಗಿದೆ. ಇವರ ಹಕ್ಕು ಚಲಾಯಿಸುವ ಹೋರಾಟ ಎಲ್ಲಿಗೆ ಹೋಗಿ ನಿಲ್ಲಲಿದೆ ನೋಡೋಣ. ನಾವು ಮೌನವಾಗಿದ್ದೇವೆ, ನಾವು ಏನು ಮಾಡೋದು ಇಲ್ಲ. 135 ಜನ ಗೆದ್ದಿದ್ದಾರೆ, ಜನ ಅವರಿಗೆ ಆಶೀರ್ವಾದ ಮಾಡಿದ್ದಾರೆ. ಒಳ್ಳೆಯ ಆಡಳಿತ ಕೊಡಲಿ ಅಂತ ಬಯಸುತ್ತೇವೆ. ಅದನ್ನ ಬಿಟ್ಟು ಬೇರೇನು ಆಲೋಚನೆ ಇಲ್ಲ ಎಂದರು.
ಮುಂಬರುವ ಲೋಕಸಭಾ ಚುನಾವಣೆಗೆ ತಮ್ಮವರಿಗೆ ಟಿಕೆಟ್ ಕೊಡಿಸಲು ಉಭಯ ನಾಯಕರ ನಡುವೆ ಫೈಟ್ ನಡೆಯುತ್ತಿದೆ. ನನಗೆ ಗೊತ್ತಿರುವಂತೆ ಸತೀಶ್ ಜಾರಕಿಹೊಳಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ. ಸತೀಶ್ ಜಾರಕಿಹೊಳಿ ಅವರು ಇಷ್ಟು ದಿನ ನಮ್ಮ ಬೆಳಗಾವಿ ನಮಗೆ ಭದ್ರಕೋಟೆ ಅಂದುಕೊಂಡಿದ್ದರು. ಅದೆಲ್ಲೋ ಒಂದು ಕಡೆ ಅವರ ಕೈ ತಪ್ಪಿ, ಅವರ ಕುಟುಂಬಕ್ಕೆ ಟಿಕೆಟ್ ಸಿಗೋದು ಅನುಮಾನ. ಇದು ನನ್ನ ಅನಿಸಿಕೆ. ನಾನು ನೋಡುತ್ತಿರೋ ಹಾಗೆ, ಲಕ್ಷ್ಮಿ ಹೆಬಾಳ್ಕರ್ ಮಗನಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಇದನ್ನು ನಾನು ಹೇಳ್ತಿಲ್ಲ, ಜನರೇ ಹೇಳುತ್ತಿದ್ದಾರೆ. ಅವರೆಲ್ಲಾ 135 ಜನ ಒಂದೇ ಪಕ್ಷದಲ್ಲಿದ್ದಾರೆ, ಒಗ್ಗಟ್ಟಾಗಿದ್ದಾರೆ. ಮೈಸೂರಿಗೆ ಶಾಸಕರು ಒಟ್ಟಿಗೆ ಹೋಗಬೇಕು ಅಂದರೆ ಎಷ್ಟು ಒಗ್ಗಟ್ಟಿದೆ. ರಸ್ತೆಯಲ್ಲಿ ಹೋಗಬೇಕಾದರೆ ಏನೂ ಆಗಲ್ಲ. ಆದರೆ ದೋಣಿಯಲ್ಲಿ ಹೋಗುತ್ತಿದ್ದಾರೆ. ನೋಡೋಣ ದೋಣಿಯನ್ನು ಯಾರು ತೂತು ಮಾಡುತ್ತಾರೋ ಎಂದು ಕಾಂಗ್ರೆಸ್ ಒಗ್ಗಟ್ಟಿನ ಕುರಿತು ಮುನಿರತ್ನ ವ್ಯಂಗ್ಯವಾಡಿದರು.