ಹೊಸಕೋಟೆ:ಇಂದು ಮಾಜಿ ಸಚಿವ ಎಂಟಿಬಿ ನಾಗರಾಜ್ ತಾಲೂಕಿನ ಮುತ್ಸಂದ್ರ ಗ್ರಾಮದಲ್ಲಿನ ಬಡ ಜನರಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿದರು.
ಬಡ ಜನರಿಗೆ ದಿನಸಿ ಕಿಟ್ ವಿತರಣೆ ಮಾಡಿದ ಮಾಜಿ ಸಚಿವ ಎಂಟಿಬಿ ಬೆಂಗಳೂರು ಹೊರವಲಯದ ಹೊಸಕೋಟೆ ತಾಲೂಕಿನ ಮುತ್ಸಂದ್ರ ಗ್ರಾಮದಲ್ಲಿ ಇಂದು ಬಡ ಕೂಲಿ ಕಾರ್ಮಿಕರಿಗೆ ಒಂದು ತಿಂಗಳಿಗೆ ಆಗುವಷ್ಟು ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾಜಿ ಸಚಿವ ಅಲ್ಲಿನ ಜನರಿಗೆ ದಿನಸಿ ಕಿಟ್ ವಿತರಣೆ ಮಾಡಿದರು. ಈ ವೇಳೆ ಎಂಟಿಬಿಗೆ ಸ್ಥಳೀಯ ಮುಖಂಡ ಪಟೇಲ್ ಬಾಬು ರೆಡ್ಡಿ ಸಾಥ್ ನೀಡಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಟಿಬಿ, ಈಗಾಗಲೇ ದೇಶದಲ್ಲಿ ಕೊರೊನಾ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೇವಲ ಎರಡು ಮೂರು ಕೆಜಿ ಆಹಾರ ಪದಾರ್ಥಗಳನ್ನು ಒದಗಿಸಿದರೆ ಖಾಲಿಯಾದ ತಕ್ಷಣ ಜನ ಹೊರ ಬರುತ್ತಾರೆ. ಹಾಗಾಗಿ ಇಂದು ಬಡ ಜನರಿಗೆ ಆಹಾರ ಧಾನ್ಯವಿರುವ ಕಿಟ್ ನೀಡಲಾಗಿದೆ. ಕಿಟ್ನಲ್ಲಿ ತಿಂಗಳಿಗಾಗುವಷ್ಟು ಅಕ್ಕಿ, ಬೇಳೆ ಸೇರಿದಂತೆ ಸುಮಾರು 28 ರೀತಿಯ ಸಾಮಗ್ರಿಗಳನ್ನು ಬಡ ಜನತೆಗೆ ಹಂಚಿಕೆ ಮಾಡಿ ಇನ್ನು ಒಂದು ತಿಂಗಳು ದಯಮಾಡಿ ಯಾರೂ ಹೊರಬರದಂತೆ ಮನವಿ ಮಾಡಿಕೊಂಡರು.
ಶರತ್ ಬಚ್ಚೇಗೌಡ ವಿರುದ್ಧ ಗುಡುಗಿದ ಎಂಟಿಬಿ:
ಇದೇ ವೇಳೆ ಶರತ್ ಬಚ್ಚೇಗೌಡ ವಿರುದ್ಧ ಗುಡುಗಿದ ಎಂಟಿಬಿ, ಅಕ್ರಮ ಕೊಳವೆ ಬಾವಿಗಳನ್ನು ತೋಡಿ ನೀರಿನ ವ್ಯಾಪಾರ ಮಾಡುತ್ತಿರುವವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇದಕ್ಕೆಲ್ಲ ಅನುಮತಿ ಕೊಡಲು ಶಾಸಕರು ಯಾರು? ಈ ಕೂಡಲೇ ಕ್ರಮ ಜರುಗಿಸದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಂಟಿಬಿ ಎಚ್ಚರಿಕೆ ನೀಡಿದರು.