ಬೆಂಗಳೂರು:ಜನತಾ ಪರಿವಾರದ ಹಿರಿಯ ನಾಯಕರಾಗಿದ್ದ ಮಾಜಿ ಉಪಮುಖ್ಯಮಂತ್ರಿ ದಿವಂಗತ ಎಂ. ಪಿ. ಪ್ರಕಾಶ್ ಅವರ ಪುತ್ರಿ, ಮೊಮ್ಮಗ ಮತ್ತು ಬೆಂಬಲಿಗರು ಇಂದು ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆ ಆದರು. ನಗರದ ಮಲ್ಲೇಶ್ವರದಲ್ಲಿರುವ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್, ರಾಜ್ಯ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕರು ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸಮ್ಮುಖದಲ್ಲಿ ಎಂ ಪಿ ಪ್ರಕಾಶ್ ಪುತ್ರಿ ಎಂ.ಪಿ. ಸುಮಾ ವಿಜಯ, ಮೊಮ್ಮಗ ಸಾತ್ವಿಕ್ ವಿಜಯಕುಮಾರ್ ಹಿರೇಮಠ ಸೇರಿದಂತೆ ಹಲವರು ಬಿಜೆಪಿ ಸೇರಿದರು.
ಮೂಲ ಜನತಾ ಪರಿವಾರದ ನಾಯಕರಾಗಿದ್ದ ಎಂ. ಪಿ ಪ್ರಕಾಶ್, ಜನತಾ ಪಕ್ಷದ ನಂತರ ಜನತಾದಳದಲ್ಲಿ ಮುಂದುವರೆದಿದ್ದರು. ಜನತಾದಳ ಇಬ್ಭಾಗವಾದಾಗ ಜೆ ಹೆಚ್ ಪಟೇಲ್ ನೇತೃತ್ವದಲ್ಲಿ ಸಂಯುಕ್ತ ಜನತಾದಳದ ಜೊತೆ ಹೆಜ್ಜೆ ಹಾಕಿದ್ದರು. ಪಟೇಲ್ ನಿಧನದ ಬಳಿಕ ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾದಳಕ್ಕೆ ಸೇರ್ಪಡೆಯಾಗಿ ಉಪ ಮುಖ್ಯಮಂತ್ರಿ ಆಗಿದ್ದರು. ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಜೀವನದ ಕಡೆಯ ಹಂತದಲ್ಲಿ ದಳ ಬಿಟ್ಟು ಕಾಂಗ್ರೆಸ್ ಸೇರಿದ್ದರು. ಅವರ ಪುತ್ರ ಕೂಡ ಕಾಂಗ್ರೆಸ್ನಿಂದ ಶಾಸಕರಾಗಿದ್ದರು. ಆದರೆ ಅನಾರೋಗ್ಯದಿಂದ ಅವರು ನಿಧನರಾದರು. ಇದೀಗ ಪ್ರಕಾಶ್ ಪುತ್ರಿ ಬಿಜೆಪಿ ಮೂಲಕ ರಾಜಕೀಯ ಪ್ರವೇಶ ಮಾಡಿದ್ದಾರೆ.