ಬೆಂಗಳೂರು: ನೆರೆ ಪರಿಹಾರದ ಸಂಬಂಧ ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿರುವುದು ಸರಿಯಲ್ಲ. ಪ್ರವಾಹ ಹಾನಿ ಬಗ್ಗೆ ಕೇಂದ್ರ ಸರ್ಕಾರ ಸಾಕ್ಷಿ ಕೇಳುತ್ತಿದೆ. ಮೋದಿ ಸರ್ಕಾರದಿಂದ ಕರ್ನಾಟಕಕ್ಕೆ ಅನ್ಯಾಯ ಆಗಿದೆ ಎಂದು ಮಾಜಿ ಸಚಿವ ಎಂ.ಬಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಎಂ.ಬಿ.ಪಾಟೀಲ್ ಹೇಳಿಕೆ ಎನ್ಡಿಆರ್ಎಫ್ ನಿಯಮಾವಳಿಗಳನ್ನು ನಾವು ಕೇಳಿದ್ದೇವೆ. ಅದನ್ನೇ ಕೇಂದ್ರ ಸರ್ಕಾರ ತಿರಸ್ಕರಿಸಿದೆ. ರಾಷ್ಟ್ರೀಯ ವಿಪತ್ತು ನೆರವು ಇನ್ನೆಲ್ಲಿ ನೀಡುತ್ತೆ ಎಂದು ಬೇಸರ ವ್ಯಕ್ತಪಡಿಸಿದ್ರು.
ಸಂತ್ರಸ್ತರ ಬದುಕು ಬೀದಿಗೆ ಬಿದ್ದಿದೆ. ರಾಜ್ಯ ಸರ್ಕಾರದಿಂದಲೂ ಸರಿಯಾದ ಸಮೀಕ್ಷೆ ಆಗಿಲ್ಲ. ಬಿಜೆಪಿ ಸರ್ಕಾರಕ್ಕೆ ಬದ್ಧತೆ, ಇಚ್ಛಾಶಕ್ತಿ ಇಲ್ಲ. ಮನೆ-ಮಠಗಳಿಲ್ಲ, ಶಾಲಾ ಕೊಠಡಿಗಳಿಲ್ಲ, ಪ್ರವಾಹ ಪರಿಸ್ಥಿತಿ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರ ವರದಿಯನ್ನೂ ಸರಿಯಾಗಿ ಕಳಿಸಿಲ್ಲ. ರಾಜ್ಯದ 25 ಬಿಜೆಪಿ ಸಂಸದರು ಮಾತನಾಡುತ್ತಿಲ್ಲ. ದಿನಕ್ಕೊಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದೆಲ್ಲಾ ಅವರು ಕಿಡಿಕಾರಿದ್ರು.
ಚಕ್ರವರ್ತಿ ಸೂಲಿಬೆಲೆ, ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಅಭಿನಂದಿಸಬೇಕು. ಅವರು ಯಾವ ಪಕ್ಷದವರೇ ಆಗಿರಲಿ. ಇಂತಹ ಸಂದರ್ಭದಲ್ಲಿ ಗಟ್ಟಿ ಧ್ವನಿ ಎತ್ತಿದ್ದಾರೆ ಎಂದು ಹೇಳಿದ್ರು.