ಬೆಂಗಳೂರು:ಮಾಜಿ ಸಚಿವ ಬಿ.ಎ.ಜೀವಿಜಯ ರಾಜ್ಯ ಕಾಂಗ್ರೆಸ್ ನಾಯಕರ ಸಮ್ಮುಖದಲ್ಲಿ ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷರ ಡಿ.ಕೆ.ಶಿವಕುಮಾರ್ ಸಮ್ಮುಖದಲ್ಲಿ ಜೆಡಿಎಸ್ ತೊರೆದು ಜೀವಿಜಯ ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್ ಸೇರಿಕೊಂಡರು. ಈ ವೇಳೆ ಪಕ್ಷದ ಬಾವುಟ ನೀಡಿ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಮಾಜಿ ಸಚಿವ ಜೀವಿಜಯ.. ಮುಂಬರುವ ದಿನಗಳಲ್ಲಿ ಸಹಕಾರಿ:
ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಇವರ ಸೇರ್ಪಡೆಯಿಂದ ಮುಂಬರುವ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬಲ ಹೆಚ್ಚಲಿದೆ. ಮುಂಬರುವ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಇತರ ಸ್ಥಳೀಯ ಸಂಸ್ಥೆಗಳ ಚುನಾವಣೆ ಜೊತೆಗೆ, ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕೂಡ ಎರಡು ಕ್ಷೇತ್ರವನ್ನು ಗೆಲ್ಲಲು ಕಾಂಗ್ರೆಸ್ ಅವಕಾಶ ಒದಗಿ ಬರಲಿದೆ. ಈ ಸೇರ್ಪಡೆಯಿಂದ ನಮ್ಮ ಪಕ್ಷ ಇನ್ನಷ್ಟು ಬಲಗೊಳ್ಳಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಓದಿ:ಜೆಡಿಎಸ್ನಿಂದ ಘರ್ ವಾಪಸಿ: ಮಾಜಿ ಸಚಿವ ಜೀವಿಜಯ ಇಂದು ಕಾಂಗ್ರೆಸ್ ಸೇರ್ಪಡೆ
ಜೆಡಿಎಸ್ ವಿರುದ್ಧ ಟೀಕೆ:
ಜೀವಿಜಯ ಮಾತನಾಡಿ, ನಾನು ಮೊದಲು ಕಾಂಗ್ರೆಸ್ನಲ್ಲೇ ಇದ್ದವನು. ಈಗ ನಾನು ರಾಜಕೀಯದಲ್ಲಿ ಸಕ್ರೀಯವಾಗಿಲ್ಲ. ಆದರೆ ದೇಶದಲ್ಲಿ ಜಾತ್ಯಾತೀತ ತತ್ವಗಳಿಗೆ ತೊಂದರೆ ಆಗ್ತಿದೆ. ನಿನ್ನೆ ಜೆಡಿಎಸ್ ಪಕ್ಷದ ನಿಲುವು ನೋಡಿ ನನಗೆ ರಾತ್ರಿ ನಿದ್ದೆ ಬರಲಿಲ್ಲ. ಜಾತ್ಯತೀತ ಅಂತ ಹೇಳಿಕೊಳ್ಳುವ ಪಕ್ಷದ ನಡೆ ನೋಡಿ ನನಗೆ ತೀವ್ರ ಬೇಸರವಾಯಿತು. ಭೂ ಸುಧಾರಣಾ ಕಾಯ್ದೆ ಪಾಸ್ ಮಾಡಲು ಬಿಜೆಪಿಗೆ ಜೆಡಿಎಸ್ ಸಹಕರಿಸಿದೆ ಎಂದು ಟೀಕಿಸಿದರು.
ಸಣ್ಣ ಅಸಮಾಧಾನ:
ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ನನ್ನ ಹೆಸರು ಹೇಳಿಲ್ಲ ಎಂದು ಎದ್ದು ನಿಂತ ಮಡಿಕೇರಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಾ ರಾವ್ ಆಕ್ಷೇಪ ವ್ಯಕ್ತಪಡಿಸಿದರು. ಡಿ.ಕೆ.ಶಿವಕುಮಾರ್ ನನ್ನ ಹೆಸರು ಹೇಳಿಲ್ಲ ಎಂದು ಎದ್ದು ನಿಂತ ರಾಜಾರಾವ್ ಬೇಸರ ತೋಡಿಕೊಂಡರು. ಹೆಸರು ಹೇಳಿದ್ದೇವೆ ಎಂದು ಅವರನ್ನು ಸಮಾಧಾನ ಮಾಡಿ ನಾಯಕರು ಕೂರಿಸಿದರು.
ತರಾತುರಿಯಲ್ಲಿ ತೆರಳಿದ ಸಿದ್ದರಾಮಯ್ಯ:
ಜೀವಿಜಯ ಸೇರ್ಪಡೆ ಆಗುತ್ತಿದ್ದಂತೆ ಕಾರ್ಯಕ್ರಮದಿಂದ ಹೊರಟ ಸಿದ್ದರಾಮಯ್ಯ, ಕಲಾಪದಲ್ಲಿ ಭಾಗವಹಿಸಬೇಕು ಎಂದು ಹೇಳಿ ವಿಧಾನಸೌಧಕ್ಕೆ ತೆರಳಿದರು. ತೆರಳುವ ತರಾತುರಿಯಲ್ಲಿ ಅವರು ಜೀವಿಜಯ ಅವರಿಗೆ ಹೂಗುಚ್ಚ ನೀಡಿ ಶುಭಾಶಯ ಕೋರಿದರು. ಸಮಾರಂಭ ಉದ್ದೇಶಿಸಿ ಮಾತನ್ನು ಕೂಡ ಅವಸರವಸರವಾಗಿ ಹೇಳಿ ತೆರಳಿದರು.
ಸಮಾರಂಭದಲ್ಲಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ವಿಧಾನ ಪರಿಷತ್ ಸದಸ್ಯ ಅಲ್ಲಂ ವೀರಭದ್ರಪ್ಪ, ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್, ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ, ಶಾಸಕ ಟಿ.ಡಿ ರಾಜೇಗೌಡ, ಜಿಲ್ಲಾಧ್ಯಕ್ಷ ಮಂಜುನಾಥ್ ಕುಮಾರ್, ಎಐಸಿಸಿ ವಕ್ತಾರ ಬ್ರಿಜೇಶ್ ಕಾಳಪ್ಪ, ಕೆಪಿಸಿಸಿ ಕಾನೂನು ವಿಭಾಗದ ಮುಖ್ಯಸ್ಥ ಪೊನ್ನಣ್ಣ, ಕೆಪಿಸಿಸಿ ಕೊಡಗು ಜಿಲ್ಲಾ ವೀಕ್ಷಕರಾದ ಮಂಜುಳಾ ರಾಜ್, ಟಿ.ಎಂ ಶಹೀದ್ ಸೇರಿದಂತೆ ಹಲವು ನಾಯಕರು ಉಪಸ್ಥಿತರಿದ್ದರು.