ಬೆಂಗಳೂರು :ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಯಾಗಿ ಮಾಜಿ ಸಚಿವ ಡಿ ಎನ್ ಜೀವರಾಜ್ರನ್ನು ನೇಮಕ ಮಾಡಲು ಸಿಎಂ ಬಿ ಎಸ್ ಯಡಿಯೂರಪ್ಪನವರು ನಿರ್ದೇಶನ ನೀಡಿದ್ದಾರೆ.
ಜೀವರಾಜ್ಗೆ ದೂರವಾಣಿ ಕರೆ ಮಾಡಿದ ಸಿಎಂ, ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಲು ನಿರ್ಧರಿಸಿದ್ದು, ಜವಾಬ್ದಾರಿ ನಿರ್ವಹಿಸುವಂತೆ ಸೂಚನೆ ನೀಡಿದ್ದಾರೆ. ಈ ಸಂಬಂಧ ಆದೇಶ ಹೊರಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿಗಳು ತಡರಾತ್ರಿ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಕಡತಕ್ಕೆ ಇಂದು ಸಹಿ ಬೀಳಲಿದ್ದು, ಅಧಿಕೃತ ನೇಮಕಾತಿ ಆದೇಶ ಹೊರ ಬೀಳಲಿದೆ ಎನ್ನಲಾಗುತ್ತಿದೆ.
ಬಿಡಿಎ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ರಾಜೀನಾಮೆ ನೀಡಿದ್ದರು. ಆ ಸ್ಥಾನಕ್ಕೆ ಮಾಜಿ ಸಚಿವ ಜೀವರಾಜ್ರನ್ನು ನೇಮಕಗೊಳಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಸಿ ಟಿ ರವಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡ ಹಿನ್ನೆಲೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಚಿಕ್ಕಮಗಳೂರಿಗೆ ಆದ್ಯತೆ ನೀಡಲು ಜೀವರಾಜ್ ಅವರಿಗೆ ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡುತ್ತಿದ್ದು, ಸಂಪುಟ ದರ್ಜೆ ಸ್ಥಾನಮಾನವನ್ನು ಕಲ್ಪಿಸಲಾಗುತ್ತದೆ ಎನ್ನಲಾಗಿದೆ.