ಬೆಂಗಳೂರು: ಮಾಜಿ ಸಚಿವ ಜಮೀರ್ ಅಹ್ಮದ್ಗೆ ಕೊರೊನಾ ಪಾಸಿಟಿವ್ ಹಿನ್ನೆಲೆ ಕ್ವಾರಂಟೈನ್ಗೆ ಒಳಗಾಗಿದ್ದಾರೆ. ಟ್ವೀಟ್ ಮಾಡಿ ವಿಚಾರ ತಿಳಿಸಿರುವ ಅವರು, ಸಣ್ಣ ಪ್ರಮಾಣದ ಜ್ವರ ಕಾಣಿಸಿಕೊಂಡ ಹಿನ್ನೆಲೆ ನಿನ್ನೆ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದೆ.
ವರದಿಯಲ್ಲಿ ಪಾಸಿಟಿವ್ ಬಂದಿರುತ್ತದೆ. ವೈದ್ಯರ ಸಲಹೆಯ ಮೇರೆಗೆ ಹೋಂ ಕ್ವಾರಂಟೈನ್ನಲ್ಲಿದ್ದೇನೆ. ಕಳೆದ ಕೆಲವು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ತಮ್ಮಲ್ಲಿ ಮನವಿ ಮಾಡುತ್ತೇನೆ ಎಂದಿದ್ದಾರೆ.
ಸಿದ್ದರಾಮಯ್ಯ ಹಾರೈಕೆ
ತಮ್ಮ ಆಪ್ತರಾಗಿರುವ ಮಾಜಿ ಸಚಿವ ಜಮೀರ್ ಅಹ್ಮದ್ಗೆ ಕೊರೊನಾ ಪಾಸಿಟಿವ್ ಹಿನ್ನೆಲೆ ಕ್ವಾರಂಟೈನ್ ಆಗಿರುವುದಕ್ಕೆ ಟ್ವೀಟ್ ಮೂಲಕ ಚೇತರಿಕೆಗೆ ಹಾರೈಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ನಮ್ಮ ಪಕ್ಷದ ಶಾಸಕರಾದ ಜಮೀರ್ ಅಹ್ಮದ್ ಅವರು ಕೊರೊನಾ ಸೋಂಕಿಗೆ ಒಳಗಾದ ಸುದ್ದಿ ತಿಳಿದು ಬೇಸರವಾಯಿತು. ಆದಷ್ಟು ಶೀಘ್ರ ಅವರು ಗುಣಮುಖರಾಗಿ ಜನ ಸೇವೆಗೆ ಮರಳಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.
ಸಿದ್ದರಾಮಯ್ಯಗೂ ಆತಂಕ
ಜಮೀರ್ ಅಹ್ಮದ್ ನಿನ್ನೆಯಷ್ಟೇ ಕೆಲ ಧಾರ್ಮಿಕ ಮುಖಂಡರ ಜೊತೆ ತೆರಳಿ ಸಿದ್ದರಾಮಯ್ಯರನ್ನು ಅವರ ಸರ್ಕಾರಿ ನಿವಾಸದಲ್ಲಿ ಭೇಟಿಯಾಗಿ ಸಮಾಲೋಚಿಸಿ ವಾಪಸಾಗಿದ್ದರು. ಇದೀಗ ಸಹಜವಾಗಿ ಸಿದ್ದರಾಮಯ್ಯ ಕೂಡ ಕೋವಿಡ್ ಆತಂಕಕ್ಕೆ ಒಳಗಾಗಿದ್ದಾರೆ.