ಬೆಂಗಳೂರು: ಪಕ್ಷದ ವರಿಷ್ಠರು ಮಹಾರಾಷ್ಟ್ರ ಕಾಂಗ್ರೆಸ್ ಉಸ್ತುವಾರಿಯ ಜವಾಬ್ದಾರಿ ನೀಡಿದ್ದಾರೆ. ಇದು ನನಗೆ ಸಂತೋಷ ತಂದಿದೆ ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸೇವೆ ಮಾಡೋಕೆ ಸೋನಿಯಾ ಗಾಂಧಿ ಅವಕಾಶ ಕೊಟ್ಟಿದ್ದಾರೆ. ವರ್ಕಿಂಗ್ ಕಮಿಟಿಯಲ್ಲೂ ಹೊಣೆ ನೀಡಿದ್ದಾರೆ. ದೇಶದಲ್ಲಿ ಮಹಾರಾಷ್ಟ್ರ ಬಹುದೊಡ್ಡ ರಾಜ್ಯ. ಅಲ್ಲಿ ರಾಜಕೀಯ ಸವಾಲುಗಳು ಸಾಕಷ್ಟಿವೆ. ಪಕ್ಷ ಸಂಘಟಿಸಿ ಮೊದಲಿನ ಸ್ಥಿತಿಗೆ ಪಕ್ಷವನ್ನ ತರುತ್ತೇನೆ ಎಂದರು.
ನಾನು ವಿದ್ಯಾರ್ಥಿ ದೆಸೆಯಿಂದಲೇ ಕಾಂಗ್ರೆಸ್ಗೆ ಬಂದವನು. ಹಲವು ಸ್ಥಾನಮಾನಗಳನ್ನ ಪಡೆದಿದ್ದೇನೆ. ಮಲ್ಲಿಕಾರ್ಜುನ ಖರ್ಗೆಯವರು ಉಸ್ತುವಾರಿಯಾಗಿದ್ದರು. ಅದರ ಅನುಕೂಲ ನನಗೆ ಸಿಗಲಿದೆ. ಅವರ ಮಾರ್ಗದರ್ಶನ ನನಗೆ ಸಿಗಲಿದೆ. ಮಹಾರಾಷ್ಟ್ರದಲ್ಲಿ ಪಕ್ಷವನ್ನು ಇನ್ನಷ್ಟು ಬಲಪಡಿಸಲು ಶಕ್ತಿಮೀರಿ ಪ್ರಯತ್ನ ಮಾಡುತ್ತೇನೆ ಎಂದರು.
ಬಿಐಇಸಿ ಮುಚ್ಚುವ ಪ್ರಯತ್ನ ನಡೆದಾಗ ನಾನೇ ಮೊದಲ ದೂರುದಾರನಾಗಿದ್ದೇನೆ. ಹ್ಯೂಮನ್ ರೈಟ್ಸ್ ಗಮನ ಬೇರೆಡೆ ಸೆಳೆದಿದ್ದೇನೆ. ಡೆತ್ ರೇಟ್ ಬಗ್ಗೆ ಸರ್ಕಾರ ತಿಳಿಸಬೇಕು ಎಂದ ಅವರು, ಸರ್ಕಾರ ಚುರುಕಾಗಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಡೆತ್ ರೇಟ್ನಲ್ಲಿ ನ್ಯಾಷನಲ್ ಆವರೇಜ್ಗಿಂತ ರಾಜ್ಯದ್ದೇ ಹೆಚ್ಚಿದೆ. ರಾಜ್ಯ ಸರ್ಕಾರದ ಅಂಕಿ-ಸಂಖ್ಯೆಗಳ ಅಧ್ಯಯನ ಕುತೂಹಲ ಮೂಡಿಸಿದೆ. ಶ್ವಾಸಕೋಶದ ಸಮಸ್ಯೆಗಳಿಂದಲೇ ಹೆಚ್ಚು ಜನ ಸಾವನ್ನಪ್ತಿದ್ದಾರೆ. ಸರ್ಕಾರ ಸತ್ಯಕ್ಕೆ ದೂರವಾಗಿದೆ ಎಂದ ಅವರು, ಜನರಿಗೆ ತಪ್ಪು ಮಾಹಿತಿ ರವಾನಿಸುತ್ತಿದೆ ಎಂದು ದೂರಿದರು.
ನಮ್ಮ ರಾಜ್ಯಕ್ಕೆ ಹೆಚ್ಚು ಮಹತ್ವ ಸಿಕ್ಕಿದೆ. ಐವರಿಗೆ ರಾಷ್ಟ್ರೀಯ ಮಟ್ಟದಲ್ಲಿ ಅವಕಾಶ ಸಿಕ್ಕಿದೆ. ರಾಷ್ಟ್ರೀಯ ಕಾಂಗ್ರೆಸ್ ರಾಜ್ಯದ ಬಗ್ಗೆ ಇಟ್ಟ ವಿಶೇಷ ಕಾಳಜಿ ಇದರಿಂದ ಸಾಬೀತಾಗುತ್ತದೆ. ಪಕ್ಷದ ವರಿಷ್ಠರು ನಮ್ಮ ಮೇಲೆ ಇರಿಸಿರುವ ಕಾಳಜಿಯನ್ನು ನಾವು ನಿರಾಶೆಗೊಳಿಸುವುದಿಲ್ಲ ಎಂದರು.
ಡ್ರಗ್ಸ್ ಆರೋಪದಲ್ಲಿ ಜಮೀರ್ ಅಹ್ಮದ್ ಹೆಸರು ಕೇಳಿ ಬರುತ್ತಿರುವ ಬಗ್ಗೆ ಮಾತನಾಡಿ, ಜಮೀರ್ ಅವ್ರೇ ಪ್ರೂವ್ ಮಾಡಿ ಅಂದಿದ್ದಾರೆ. ಪ್ರೂವ್ ಮಾಡಿದ್ರೆ ನಾನು ನನ್ನ ಆಸ್ತಿ ಬಿಟ್ಟು ಕೊಡ್ತೇನೆ ಎಂದು ಸವಾಲನ್ನು ಹಾಕಿದ್ದಾರೆ. ಹಾಗಾಗಿ ಅದರ ಬಗ್ಗೆ ನಾನು ಮಾತನಾಡಲ್ಲ. ಅವರೇ ಇದರ ಬಗ್ಗೆ ಸಾಕಷ್ಟು ಸ್ಪಷ್ಟೀಕರಣ ನೀಡಿದ್ದಾರೆ ಎಂದರು.