ಬೆಂಗಳೂರು :ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಜೆಡಿಎಸ್ ಮುಳುಗುವ ಹಡಗು ಎಂದು ಹೇಳಿದ್ದಾರೆ. 2023ರ ಚುನಾವಣೆಯಲ್ಲಿ ಯಾರು ಮುಳುಗುತ್ತಾರೆ ಅಂತಾ ನೋಡೋಣ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಟಾಂಗ್ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್ ಡಿ ರೇವಣ್ಣ, 2023ರ ಚುನಾವಣೆಯವರೆಗೂ ಈಗಿರುವ ಬಿಜೆಪಿ ಉಸ್ತುವಾರಿಯನ್ನೇ ಮುಂದುವರಿಸಿ ಅಂತಾ ಕೇಂದ್ರ ಬಿಜೆಪಿ ಮುಖಂಡರಲ್ಲಿ ಮನವಿ ಮಾಡುತ್ತೇನೆ.
ದೇವೇಗೌಡರು 60 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಏಳು ಬೀಳು ಎಲ್ಲಾ ನೋಡಿದ್ದಾರೆ. ಹಡಗುಗಳು ಮುಳುಗಿದಾಗ ಸಬ್ ಮರೀನ್ಗಳು ಕೆಲಸ ಮಾಡುತ್ತವೆ. ಅದೇ ರೀತಿ ನಮ್ಮ ಜೆಡಿಎಸ್ ಪಕ್ಷ ಕೂಡ ಎಂದು ತಿರುಗೇಟು ನೀಡಿದರು.
ಹಡಗು ಮುಳುಗಿದರೂ ಕೆಲಸ ಮಾಡುವ ಮೆಷಿನರಿಯನ್ನು ಪಕ್ಷದಲ್ಲಿ ಇಟ್ಟುಕೊಂಡಿದ್ದೇವೆ. 2023ರ ಚುನಾವಣೆಗೆ ನೋಡೋಣ. ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡಿಲ್ಲ ಅಂತಾ ಹೇಳಿದ್ದಾರೆ. ಎರಡು ವರ್ಷ ಏನು ದ್ವೇಷದ ರಾಜಕಾರಣ ಮಾಡಿದ್ದಾರೆ ಅಂತಾ ಅಸೆಂಬ್ಲಿಯಲ್ಲಿ ಹೇಳುತ್ತೇನೆ ಎಂದರು.
ರಾಜ್ಯದ ಸಿಎಂ ಸೌಜನ್ಯದಿಂದ ದೇವೇಗೌಡರನ್ನು ನೋಡಲು ಬಂದಿದ್ದರು, ಗೌರವ ಕೊಟ್ಟಿದ್ದೇವೆ. ನಾವೇನಾದರೂ ಬಿಜೆಪಿ ಜೊತೆ ಸೇರುತ್ತೇವೆ ಅಂತಾ ಅರ್ಜಿ ಹಾಕಿದ್ದೇವಾ? ಎಂದು ಪ್ರಶ್ನಿಸಿದರು.
ಕಲಬುರಗಿ ಪಾಲಿಕೆ ಮೈತ್ರಿ ವಿಚಾರವಾಗಿ ಮಾತನಾಡಿದ ರೇವಣ್ಣ, ಮಲ್ಲಿಕಾರ್ಜುನ್ ಖರ್ಗೆ ಮತ್ತು ಹೆಚ್ ಡಿ ದೇವೇಗೌಡರು ಸಮಕಾಲೀನರು. ದೇವೇಗೌಡರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಅದಕ್ಕೆ ಬದ್ಧ. ಜೆಡಿಎಸ್ ಪಕ್ಷ ಎಲ್ಲಿದೆ ಅಂತಾ 2023ರಲ್ಲಿ ತೋರಿಸುತ್ತೇವೆ. ಕಾಲವೇ ನಿರ್ಧರಿಸುತ್ತದೆ, ಸತ್ಯವನ್ನ ಜಾಸ್ತಿ ದಿನ ಮುಚ್ಚಿಡಲು ಆಗಲ್ಲ ಎಂದರು.
ಓದಿ:ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚಾಗಿ ಸಿಕ್ಕಿದ್ದು ಕೇವಲ 14 ಸ್ಥಾನ ಮಾತ್ರ : ವಿ.ಎಸ್. ಉಗ್ರಪ್ಪ