ಬೆಂಗಳೂರು: ಮೈತ್ರಿ ಸಂಬಂಧ ಪಕ್ಷದ ವರಿಷ್ಠರು ಹೇಳಬೇಕು. ನಮ್ಮ ಪಕ್ಷದ ಬೆಳವಣಿಗೆ ವಿಚಾರದಲ್ಲಿ ಪಕ್ಷದ ಮುಖಂಡರು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೂ ನಾವುಗಳು ಬದ್ಧ ಎಂದು ಮಾಜಿ ಸಚಿವ ಹೆಚ್ ಡಿ ರೇವಣ್ಣ ಹೇಳಿದರು. ವಿಧಾನಸೌಧದಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ವಿಚಾರವಾಗಿ ಪ್ರತಿಕ್ರಿಯಿಸಿ, ಮೊನ್ನೆ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಪಕ್ಷ ಸಂಘಟನೆ ಬಗ್ಗೆಯಷ್ಟೇ ಚರ್ಚೆಯಾಗಿದೆ. ಉಳಿದ ವಿಚಾರಗಳ ಬಗ್ಗೆ ಯಾವ ಚರ್ಚೆ ನಡೆದಿದೆಯೋ ಗೊತ್ತಿಲ್ಲ ಎಂದು ಹೇಳಿದರು.
ಈಗ ಮೊನ್ನೆ ದಿನ ನಮ್ಮ ನಾಯಕರಾದ ದೇವೇಗೌಡರು, ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ, ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಎಲ್ಲರೂ ಸೇರಿ ಪಕ್ಷದ ಬೆಳವಣಿಗೆ ಬಗ್ಗೆ ಚರ್ಚೆ ಮಾಡಿದ್ದೇವೆ. ಸೆ.10 ರಂದು ಅರಮನೆ ಮೈದಾನದಲ್ಲಿ ಸಮಾವೇಶ ಮಾಡುತ್ತಿದ್ದೇವೆ. ಏನು ಮಾಡಬೇಕು ಅಂತ ಅಲ್ಲಿ ನಿರ್ಧಾರ ಮಾಡುತ್ತೇವೆ. ಎರಡೂ ರಾಷ್ಟ್ರೀಯ ಪಕ್ಷಗಳನ್ನು ದೂರ ಇಡಬೇಕಾ ಹೇಗೆ ಅಂತ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.
ದೇವೇಗೌಡ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ವಿಚಾರವಾಗಿ ಮಾತನಾಡಿ, ಅವರಿಬ್ಬರ ಭೇಟಿಯ ವಿಚಾರ ನನಗೆ ಗೊತ್ತಿಲ್ಲ.
ಇನ್ನು ಯಾವುದೇ ತೀರ್ಮಾನ ಮಾಡಿಲ್ಲ. ಮುಂದೆ ವಿಧಾನಸಭಾ ಚುನಾವಣೆಗೆ ಪಕ್ಷ ಸದೃಢ ಮಾಡಬೇಕೆಂದು ನಿರ್ಧಾರ ಮಾಡಿದ್ದೇವೆ. ಲೋಕಸಭಾ ಚುನಾವಣೆ ಮೈತ್ರಿ ಬಗ್ಗೆ ನನಗೆ ಗೊತ್ತಿಲ್ಲ. ಲೋಕಸಭೆಯಲ್ಲಿ ಮೈತ್ರಿ ವಿಚಾರ ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡರು ಹಾಗೂ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಬಿಟ್ಟ ವಿಚಾರ. ಹಾಸನದಲ್ಲಿ ನಮ್ಮ ಪಕ್ಷ ಭದ್ರವಾಗಿದೆ ಎಂದು ಹೇಳಿದರು.