ಬೆಂಗಳೂರು: ರಾಜ್ಯದಲ್ಲಿ 2023 ಕ್ಕೆ ಮತ್ತೊಮ್ಮೆ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಭವಿಷ್ಯ ನುಡಿದಿದ್ದಾರೆ.
ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಅಂದು ಏಕಾಂಗಿಯಾಗಿ ಅಧಿಕಾರಕ್ಕೆ ಬರುತ್ತೇವೋ, ಮೈತ್ರಿ ಸರ್ಕಾರ ಬರುತ್ತದೆಯೋ ಹೇಳುವುದಿಲ್ಲ. ಆದರೆ ಅಧಿಕಾರಕ್ಕೆ ಬರುವುದು ಪಕ್ಕಾ ಎಂದರು. ಕುಮಾರಣ್ಣ ಹತ್ರ ಕೆಲವು ಗ್ರಹಗಳು ಇದ್ದವು. ಅವು ಈಗ ಡಿಕೆಶಿ ಹತ್ರ ಸೇರಿವೆ. ಕುಮಾರಣ್ಣ ಕೆಲ ದಿನ ನೋವು ಅನುಭವಿಸಿದರು, ಆ ಗ್ರಹದ ಎಫೆಕ್ಟ್ ಡಿಕೆಶಿ ಅನುಭವಿಸೋದು ಬೇಡ ಅಂತ ನಮ್ಮ ಮನವಿ. ಇನ್ನೂ ಕೆಲವು ಗ್ರಹಗಳಿವೆ, ಅವು ಹೋದರೆ ಎಲ್ಲವೂ ಸ್ವಚ್ಛ ಆಗುತ್ತೆವೆ. ಕಾಂಗ್ರೆಸ್‌ನಲ್ಲಿ ಗ್ರಹಗಳು ಕಮ್ಮಿ ಇವೆ. ಈ ಗ್ರಹಗಳೆಲ್ಲ ಹೋದರೆ, ಅವರಿಗೆ ಒಳ್ಳೆಯದಂತೂ ಆಗಲ್ಲ. ಭಗವಂತ ಶಿವಕುಮಾರ್ ಅವರಿಗೆ ಒಳ್ಳೆಯದು ಮಾಡಲಿ. ಒಂಭತ್ತು ಗ್ರಹಗಳು ಸುತ್ತುತ್ತವೆ. ಗ್ರಹಗಳು ಪಥ ಬದಲಿಸುತ್ತಿವೆ. ಕೆಪಿಸಿಸಿ ಅಧ್ಯಕ್ಷರು ಅದನ್ನ ಬರಮಾಡಿಕೊಳ್ಳುತ್ತಿದ್ದಾರೆ. ಕೆಟ್ಟ ಗ್ರಹಗಳೆಲ್ಲ ಹೋದರೆ ಜೆಡಿಎಸ್ ಪಕ್ಷಕ್ಕೆ ಒಳ್ಳೆಯದು. 2023ಕ್ಕೆ ಜೆಡಿಎಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ. ಕೆಟ್ಟ ಗ್ರಹಗಳೆಲ್ಲ ಹೋದಷ್ಟು ಒಳ್ಳೆಯದೇ ಎಂದರು.
ಕಲಾಪ ಚರ್ಚೆ ನಿಯಮ 62ರಲ್ಲಿ ಚರ್ಚೆ ಕೈಗೆತ್ತಿಕೊಳ್ಳುವ ಸಂಬಂಧ ಪಕ್ಷದ ನಾಯಕ ಮತ್ತು ಸದಸ್ಯರು ಸೇರಿ ಶಾಸಕಾಂಗ ಸಭೆ ನಡೆಸಿದ್ದೇವೆ. 2019-20, 20-21 ನೇ ಸಾಲಿನಲ್ಲಿ ಕೊಟ್ಟ ಕಾಮಗಾರಿ ಟೆಂಡರ್ ಹಂತದಲ್ಲಿದ್ದವು. ಕೆಲವು ಕಾಮಗಾರಿ ಆರಂಭವಾಗಿದ್ದವು. ಕೆಲವು ಇಲಾಖೆ ಹಂತದಲ್ಲಿದ್ದವು. ಸಿಎಂ ಹೇಳಿದ್ದರು ದ್ವೇಶದ ರಾಜಕಾರಣ ಮಾಡಲ್ಲ, ಎಲ್ಲಾ ಕಾಮಗಾರಿ ಮಾಡಿಸೋಣ ಅಂತ. ಕಾವೇರಿ ಬೇಸಿನ್‌ನಲ್ಲಿ ಮೂರ್ನಾಲ್ಕು ಜನರಿಗೆ ಟೆಂಡರ್ ನೀಡಿದ್ದಾರೆ. ಕಾವೇರಿ ನಿಗಮದಲ್ಲಿ 515 ಕೋಟಿ ಕೊಡಲಾಗಿದೆ. ರೈತರು ಜಮೀನು ಕಳೆದುಕೊಂಡಿದ್ದಾರೆ, ಅವರಿಗೆ ಜಮೀನು ಇಲ್ಲ, ಹಣವೂ ಇಲ್ಲ. ಒಬ್ಬನಿಗೆ ಹಣ ಕೊಟ್ಟು, ಮತ್ತೊಬ್ಬರಿಗೆ ನೀಡಿಲ್ಲ. ರಾಜ್ಯದ ಮೂರು ಪಕ್ಷದ ಶಾಸಕರಿಗೆ, ಹೆಚ್.ಡಿ.ಕೆ ಸಿಎಂ ಆಗಿದ್ದಾಗ ಮೀಸಲಿಟ್ಟ ಹಣ ಕೊಡುವಂತೆ ಆಗ್ರಹ ಮಾಡುತ್ತೇವೆ ಎಂದರು.