ಬೆಂಗಳೂರು :ಬಿಜೆಪಿ-ಜೆಡಿಎಸ್ ಮೈತ್ರಿ ನೂರಕ್ಕೆ ನೂರರಷ್ಟು ಆಗುತ್ತದೆ. ಕ್ಷೇತ್ರ ಹಂಚಿಕೆ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ ಎಂದು ಮಾಜಿ ಸಚಿವ, ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ಹೇಳಿದ್ದಾರೆ. ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗು ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಚರ್ಚೆ ಮಾಡಿದ್ದಾರೆ. ಮೈತ್ರಿ ಆಗಲಿದೆ. ಆದರೆ ಕ್ಷೇತ್ರ ಹಂಚಿಕೆ ಬಗ್ಗೆ ಚರ್ಚೆ ಆಗಿಲ್ಲ. ನಾವೂ ಕೇಳಿಲ್ಲ, ಅವರೂ ಹೇಳಿಲ್ಲ. ಸದ್ಯಕ್ಕೆ ನಮಗೆ ಕಾಂಗ್ರೆಸ್ ಪಕ್ಷವನ್ನು ದೂರವಿಡುವುದೇ ಗುರಿ. ಅದಕ್ಕಾಗಿ ಬಿಜೆಪಿ-ಜೆಡಿಎಸ್ ಮೈತ್ರಿ ಆಗಲಿದೆ ಎಂದರು.
ಗ್ಯಾರಂಟಿಯಲ್ಲೇ ಮುಳುಗಿದೆ ಸರ್ಕಾರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ನಾಲ್ಕು ತಿಂಗಳು ಆಗಿದೆ. ಭೀಕರ ಬರಗಾಲ ಬಂದಿದ್ದರೂ, ಸಿಎಂ ಸೇರಿದಂತೆ ಎಲ್ಲರೂ ಗ್ಯಾರಂಟಿಯಲ್ಲೇ ಮುಳುಗಿದ್ದಾರೆ. ಸರ್ಕಾರ ನೂರು ದಿನದ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಚರಣೆ ಮಾಡಿದೆ. ಸರ್ಕಾರ ರಚನೆಯಾಗಿ ನಾಲ್ಕು ತಿಂಗಳಾಗಿದ್ದರೂ, ಇದುವರೆಗೂ ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಕೈಗೊಂಡಿಲ್ಲ ಎಂದು ಟೀಕಿಸಿದರು.
ಸರ್ಕಾರದಲ್ಲಿ ವರ್ಗಾವಣೆ ದಂಧೆ ಹೆಚ್ಚಾಗಿದೆ. ರೈತರ ಕೃಷಿ ಚಟುವಟಿಕೆಗೆ ಯಾವುದೇ ಉಪಕರಣ ಕೊಟ್ಟಿಲ್ಲ. ಹಲವೆಡೆ ಬೆಳೆ ಒಣಗಿ ಹೋಗಿದೆ. 45 ಲಕ್ಷ ರೈತರಿಗೆ ಕೇಂದ್ರ, ರಾಜ್ಯ ಸರ್ಕಾರ ಸೇರಿ ಹಣ ನೀಡುತ್ತಿದ್ದರು. ಆದರೆ ರಾಜ್ಯ ಸರ್ಕಾರ ಈಗ ಅದನ್ನು ನಿಲ್ಲಿಸಿದೆ ಎಂದು ದೂರಿದರು.
ಕಾವೇರಿ ನೀರನ್ನು ತಮಿಳುನಾಡಿಗೆ ಇವತ್ತಿಗೂ ಬಿಡುತ್ತಿದ್ದೀರಿ. ಈಗ ನೀರು ಬಿಟ್ಟರೆ ಇರುವ 16 ಟಿಎಂಸಿ ನೀರಿನಲ್ಲಿ 7 ಟಿಎಂಸಿ ನೀರು ಹೋಗಿ ಕೇವಲ 9 ಟಿಎಂಸಿ ನೀರು ಇರುತ್ತದೆ. ಇದರಿಂದ ಬೆಂಗಳೂರಿಗೆ ಕುಡಿಯಲು ನೀರು ಎಲ್ಲಿ ಕೊಡ್ತೀರಿ?. ಇಂತಹ ಪರಿಸ್ಥಿತಿಯಲ್ಲಿ ಆಪರೇಷನ್ ಹಸ್ತ ಮಾಡಿಕೊಂಡು ಕುಳಿತಿದ್ದೀರಾ?, ನೀವು ಬನ್ನಿ ಎಂದು ಕರೆಯುತ್ತಿದ್ದೀರಾ ಎಂದು ಜಿಟಿಡಿ ಪ್ರಶ್ನೆ ಮಾಡಿದರು.
ತಮಿಳುನಾಡಿಗೆ ನೀರು ಬಿಡುವುದನ್ನು ನಿಲ್ಲಿಸಬೇಕಿತ್ತು. ಬಿಡುವುದಿಲ್ಲವೆಂದು ಹೇಳಬೇಕಿತ್ತು. ಏನಾಗುತಿತ್ತು?. ಸುಪ್ರೀಂ ಕೋರ್ಟ್ಗೆ ಹೋಗ್ತಿದ್ರು. ಆಗ ನೀವು ಕೋರ್ಟ್ಗೆ ಹೇಳಬಹುದಿತ್ತು. ಕೂಡಲೇ ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿ ಎಂದು ಒತ್ತಾಯಿಸಿದರು.