ಬೆಂಗಳೂರು:ಲೋಕಸಭೆ ಚುನಾವಣೆಯ ಮಾತ್ರವಲ್ಲ.. ಬಿಬಿಎಂಪಿ, ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿಯೂ ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸಲಿದ್ದು, ಮೈತ್ರಿಯೇ ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಹಿಡಿಯಲಿದೆ ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ ಟಿ ದೇವೇಗೌಡ ಹೇಳಿದರು. ನಗರದ ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ಬಿಬಿಎಂಪಿ ಮತ್ತು ಜಿಲ್ಲಾ ಪಂಚಾಯಿತಿನಲ್ಲಿ ಜೆಡಿಸ್ ಬಿಜೆಪಿ ಜೊತೆ ಸೇರಿ ಅಧಿಕಾರ ಹಿಡಿಯುತ್ತದೆ. ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಬಿಜೆಪಿಗೆ ಇದೆ, ನಾವು ಅವರು ಒಟ್ಟಾಗುತ್ತೇವೆ ಎಂದು ಜೆಡಿಎಸ್ ಸಮಾವೇಶದಲ್ಲಿ ಮೈತ್ರಿ ಬಗ್ಗೆ ಜಿ ಟಿ ದೇವೇಗೌಡ ಘೋಷಿಸಿದರು. ಮೋದಿ ಪ್ರಧಾನಿಯಾಗುವುದು ನಿಶ್ಚಿತ. 130 ವರ್ಷದ ಕಾಂಗ್ರೆಸ್ ದೂಳಿಪಟ ಆಗೋದು ನಿಶ್ಚಿತ ಎಂದು ಭವಿಷ್ಯ ನುಡಿದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಂ ಇಬ್ರಾಹಿಂ ಮಾತನಾಡಿ, ಕುದುರೆ ಚೆನ್ನಾಗಿದ್ದರೆ ಖರೀದಿ ಮಾಡುವವನು ಮನೆಗೆ ಬರ್ತಾನೆ, ಮಾರ್ಕೆಟ್ಗೆ ಹೋಗುವ ಅವಶ್ಯಕತೆ ಇಲ್ಲ, ಜನತಾದಳ ಸ್ಪಷ್ಟವಾಗಿದೆ. ಜೆಡಿಎಸ್ 19 ರಿಂದ 120 ಸ್ಥಾನವಾಗೋದು ಕಷ್ಟವಲ್ಲ. ಸರ್ಕಾರದ ಪರಿಸ್ಥಿತಿ ಹೇಗಿದೆ ಅಂದರೆ ಡಿಸೆಂಬರ್‌ನಲ್ಲಿ ಸಂಬಳ ಕೊಡೋಕೆ ಆಗದೆ ಇರುವ ಪರಿಸ್ಥಿತಿ ಬಂದಿದೆ. ಬಸವಣ್ಣ, ಅಂಬೇಡ್ಕರ್ ಸಿದ್ಧಾಂತದಲ್ಲಿ ಜೆಡಿಎಸ್ ಇದೆ. ನಮಗೆ ಯಾರ ಜೊತೆ ಕೂಡ ಮೈತ್ರಿ ಮಾಡಿಕೊಳ್ಳುವ ಅಗತ್ಯ ಇಲ್ಲ. ಆದರೆ ಯಾರು ಮುಂದೆ ಬಂದು ನಮಗೆ ಗೌರವ ಕೊಡ್ತಾರೋ ಅವರನ್ನು ಸ್ವಾಗತ ಮಾಡುತ್ತೇವೆ ಎಂದರು.