ಬೆಂಗಳೂರು :ರಾಜ್ಯ ಬಿಜೆಪಿ ಹಮ್ಮಿಕೊಂಡಿರುವ ಜನಸ್ವರಾಜ್ ಯಾತ್ರೆಯನ್ನು ಕಾಂಗ್ರೆಸ್ನ ಮಾಜಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ತೀವ್ರವಾಗಿ ಖಂಡಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿರುವ ಅವರು, ಜನಸ್ವರಾಜ್ ಯಾತ್ರೆಯನ್ನು ಮಾಡುತ್ತಿರುವ ಬಿಜೆಪಿಗರಿಗೆ, ಸ್ವರಾಜ್ಯ ಎಂದರೇನು ಅದು ಹೇಗಿರುತ್ತದೆ ಎಂಬ ಕನಿಷ್ಠ ಕಲ್ಪನೆ ಇಲ್ಲ. ಸ್ವರಾಜ್ಯ ಅಂದರೆ ಒಂದು ರಾಜ್ಯದೊಳಗೆ ಸ್ವತಂತ್ರವಾಗಿ ಬದುಕುವ ಜನರಿರುವ ಪ್ರದೇಶದಲ್ಲಿ ಪ್ರಜಾಪ್ರಭುತ್ವದ ವಾತಾವರಣ ಇದ್ದು, ಅಲ್ಲಿನ ಜನಸಾಮಾನ್ಯರ ಏಳಿಗೆ ಮತ್ತು ಸಂರಕ್ಷಣೆಯು ಸಾಂಗವಾಗಿ ಜರುಗುವುದಾಗಿದೆ ಎಂದಿದ್ದಾರೆ.
ಆದರೆ, ಸ್ವರಾಜ್ಯದ ಅರ್ಥಕ್ಕೂ ರಾಜ್ಯ ಬಿಜೆಪಿ ಪಕ್ಷದ ನಡವಳಿಕೆಗೂ ಒಂದಕ್ಕೊಂದು ಸಂಬಂಧವೇ ಇಲ್ಲ. ಇವರ ಅಧಿಕಾರವಧಿಯಲ್ಲಿ ಕೇವಲ ದುರಾಡಳಿತ, ಬೆಲೆ ಏರಿಕೆ, ಸಂವಿಧಾನ ವಿರೋಧಿ ನಡವಳಿಕೆ, ದೇಶದ ಹಿತಕ್ಕೆ ವಿರುದ್ಧವಾದ ಜನದ್ರೋಹಿ ನಡವಳಿಕೆಗಳೇ ಢಾಳಾಗಿ ಇವೆ. ಇವರದ್ದು ವಾಸ್ತವವಾಗಿ "ಜನದ್ರೋಹಿ ಯಾತ್ರೆಯೇ" ಆಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಹೀಗಾಗಿ, ಬಿಜೆಪಿಗರು ತಮ್ಮ ಯಾತ್ರೆಗೆ ಜನದ್ರೋಹಿ ಯಾತ್ರೆ ಎಂದಿಟ್ಟುಕೊಳ್ಳುವುದೇ ಸೂಕ್ತ ಎನಿಸುತ್ತದೆ. ಡಾಲರ್ ತಜ್ಞ ನಳಿನ್ ಕುಮಾರ್ ಕಟೀಲ್ ಅವರೇ, ನಿಮ್ಮ ಜನಸ್ವರಾಜ್ ಯಾತ್ರೆಯನ್ನು ಜನದ್ರೋಹಿ ಯಾತ್ರೆ ಎಂಬುದಾಗಿ ಹೆಸರು ಬದಲಿಸಬಹುದೇ ಚಿಂತಿಸಿ ಎಂದಿದ್ದಾರೆ.
ರಾಜ್ಯ ಬಿಜೆಪಿ ಹಮ್ಮಿಕೊಂಡಿದ್ದ ಜನ ಸ್ವರಾಜ್ಯದ ಬಗ್ಗೆ ಕಾಂಗ್ರೆಸ್ ಪಕ್ಷದಿಂದ ತೀವ್ರ ಅಸಮಾಧಾನ ಹಾಗೂ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರತಿಯೊಬ್ಬ ನಾಯಕರು ಬಿಜೆಪಿಯ ನಿಲುವನ್ನು ಖಂಡಿಸಿ ತಮ್ಮ ಹೇಳಿಕೆ ನೀಡುತ್ತಿದ್ದಾರೆ.