ಬೆಂಗಳೂರು:ಮಾಜಿ ಸಚಿವ ಹಾಗು ಮಾಜಿ ವಿಧಾನಸಭೆ ಸ್ಪೀಕರ್ ದಾರದಹಳ್ಳಿ ಬೈರೇಗೌಡ ಚಂದ್ರೇಗೌಡ (87) ನಿಧನರಾಗಿದ್ದಾರೆ. ಇಂದು ಮುಂಜಾನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಅವರು ಇಹಲೋಹ ತ್ಯಜಿಸಿದರು. ಕೆಲವು ವರ್ಷಗಳಿಂದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಚಂದ್ರೇಗೌಡರು ಸಕ್ರಿಯ ರಾಜಕೀಯದಿಂದ ದೂರ ಉಳಿದಿದ್ದರು. ಬೆಂಗಳೂರಿನಲ್ಲಿ ವಾಸವಿದ್ದ ಅವರನ್ನು ಇತ್ತೀಚೆಗೆ ದಾರದಹಳ್ಳಿಗೆ ಕರೆತರಲಾಗಿತ್ತು ಎಂದು ಕುಟುಂಬ ಮೂಲಗಳಿಂದ ಮಾಹಿತಿ ತಿಳಿದುಬಂದಿದೆ.
ಮೂಡಿಗೆರೆ ಅಡ್ಯಂತಾಯ ರಂಗಮಂದಿರದಲ್ಲಿ ಇಂದು ಮಧ್ಯಾಹ್ನ 2 ರಿಂದ ಸಂಜೆ 6ರವರೆಗೆ ಪಾರ್ಥಿವ ಶರೀರದ ಸಾರ್ವಜನಿಕರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಬುಧವಾರ ಮಧ್ಯಾಹ್ನ ದಾರದಹಳ್ಳ ಪೂರ್ಣಚಂದ್ರ ಎಸ್ಟೇಟ್ನಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಬಿಜೆಪಿ ನಾಯಕರ ಸಂತಾಪ: ಮಾಜಿ ಸಚಿವ, ರಾಜಕೀಯ ಮುತ್ಸದ್ಧಿ ಶ್ರೀ ಡಿ.ಬಿ.ಚಂದ್ರೇಗೌಡರು ವಿಧಿವಶರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಅವರು ಶಾಸಕ, ಸಂಸದ, ರಾಜ್ಯಸಭಾ ಸದಸ್ಯ, ಕಾನೂನು ಸಚಿವರಾಗಿ ಅಪಾರ ಸೇವೆ ಸಲ್ಲಿಸಿದ್ದರು. ಅವರ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸುತ್ತಾ, ಅವರ ಕುಟುಂಬ, ಅಭಿಮಾನಿಗಳಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸುತ್ತೇನೆ ಎಂದು ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ವ್ಯಕ್ತಿತ್ವದಿಂದ ಗುರುತಿಸಿಕೊಂಡಿದ್ದ ಚಂದ್ರೇಗೌಡರು ನನ್ನ ನೆರೆ ಮನೆಯಲ್ಲಿಯೇ ಇದ್ದು ನನಗೆ ಅತ್ಯಂತ ಆತ್ಮೀಯರಾಗಿದ್ದರು. ಕಳೆದ ತಿಂಗಳು ಅವರ ಮನೆಗೆ ತೆರಳಿ ಆರೋಗ್ಯ ವಿಚಾರಿಸಿದ್ದೆ, ಈಗ ಅವರು ನಮ್ಮನ್ನು ಅಗಲಿರುವುದು ಮನೆಯ ಹಿರಿಯರೊಬ್ಬರನ್ನು ಕಳೆದುಕೊಂಡಂತೆ ಆಗುತ್ತಿದೆ. ಚಂದ್ರೇಗೌಡರ ಅಗಲಿಕೆಯಿಂದ ರಾಜ್ಯ ಒಬ್ಬ ಪ್ರಾಮಾಣಿಕ ಹಿರಿಯ ನಾಯಕನನ್ನು ಕಳೆದುಕೊಂಡಂತಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ, ಅವರ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಅವರ ಕುಟುಂಬ ವರ್ಗ ಹಾಗೂ ಅವರ ಅಭಿಮಾನಿಗಳಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬಸವರಾಜ ಬೊಮ್ಮಾಯಿ ಎಕ್ಸ್‌ನಲ್ಲಿ ಸಂತಾಪ ವ್ಯಕ್ತಪಡಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಸಂತಾಪ ತಿಳಿಸಿದ್ದಾರೆ.